

ಮೂಲ್ಕಿ: ಹಿಂದುಗಳನ್ನು ಗುರುತಿಸಿ ಕೊಲ್ಲುವ ಮುಸ್ಲಿಂ ಭಯೋತ್ಪಾದಕರ ವಿರುದ್ಧ ಹೋರಾಟದಲ್ಲಿ ಹಿಂದುಗಳು ಒಂದಾಗಬೇಕು. ಆದರೆ ಧರ್ಮವನ್ನು ಮುನ್ನಡೆಸುವ ಸ್ವಾಮೀಜಿಗಳು ತುಟಿ ಬಿಚ್ಚದಿರುವುದು ಖೇದಕರ ಎಂದು ಹಿಂದು ಮುಖಂಡ ಸುನಿಲ್ ಆಳ್ವ ಹೇಳಿದರು
ಪಹಲ್ಗಾಮ್ ನರಮೇಧ ಖಂಡಿಸಿ ಹಿಂದು ಯುವ ಸೇನೆ ಮತ್ತು ಮಹಿಳಾ ಘಟಕ, ಭಾರತ್ ಮಾತಾ ಸೇವಾ ಬ್ರಿಗೇಡ್ ಮೂಲ್ಕಿ, ಬಿಜೆಪಿ ಮಹಿಳಾ ಮೋರ್ಚಾ ಮೂಲ್ಕಿ-ಮೂಡುಬಿದಿರೆ ಮಂಡಲ ಸಹಯೋಗದಲ್ಲಿ ಮೂಲ್ಕಿ ಪೇಟೆಯಲ್ಲಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ನಾಯಕ ಈಶ್ವರ ಕಟೀಲು ಮಾತನಾಡಿ, ಭಯೋತ್ಪಾದಕರು ಹಿಂದುಗಳನ್ನು ಗುರುತಿಸಿ ಕೊಲ್ಲುತ್ತಿರುವ ಈ ದಿನಗಳಲ್ಲಿ ಹಿಂದುಗಳು ಸಂಘಟಿತರಾಗಿ ಹಿಂದುತ್ವವನ್ನು ಗಟ್ಟಿಮಾಡಬೇಕು. ಇಲ್ಲವಾದಲ್ಲಿ ಕಾಶ್ಮೀರದ ಭಯೋತ್ಪಾದನೆ ನಮ್ಮ ಮನೆ ಜಗಲಿಗೆ ಬರಲು ಹೆಚ್ಚು ಸಮಯ ತಗಲದು ಎಂದರು.
ಉದ್ಯಮಿ ಹರೀಶ್ ಪುತ್ರನ್ ಮಾತನಾಡಿ, ಹಿಂದುಗಳು ಜಾತಿ, ಭೇದ ಮರೆತು ಒಗ್ಗಟ್ಟಾಗಬೇಕು. ಎಲ್ಲ ರೀತಿಯಲ್ಲಿ ಹಿಂದುತ್ವ ಬಲಗೊಂಡಲ್ಲಿ ಮಾತ್ರ ಶಾಂತಿ ನೆಮ್ಮದಿ ಸಾಧ್ಯವಿದೆ ಎಂದರು.
ಕೆ.ಭುವನಾಭಿರಾಮ ಉಡುಪ, ಸತೀಶ್ ಅಂಚನ್, ಹರ್ಷರಾಜ ಶೆಟ್ಟಿ ಜಿ.ಎಂ, ಶ್ಯಾಮ್ ಪ್ರಸಾದ್, ಶೈಲೇಶ್ ಕುಮಾರ್, ರಾಧಿಕಾ ಯಾದವ ಕೋಟ್ಯಾನ್, ಸುಭಾಶ್ ಶೆಟ್ಟಿ, ರಶ್ಮಿ ಆಚಾರ್ಯ, ಪೂರ್ಣಿಮಾ ಹಳೆಯಂಗಡಿ, ಕುಸುಮಾ ಚಂದ್ರಶೇಖರ್, ನವೀನ್ ರಾಜ್, ಸಾಧು ಪೂಜಾರಿ ಮಟ್ಟು, ಕೇಶವ ಕಟೀಲು ಮತ್ತಿತರರಿದ್ದರು.
ಮೂಲ್ಕಿ ವಿಜಯ ಸನ್ನಿಧಿ ಕಟ್ಟಡದ ಎದುರಿನಿಂದ ಮೂಲ್ಕಿ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೊಂಬತ್ತಿ ಉರಿಸಿ ಮೌನ ಪ್ರಾರ್ಥನೆ ಹಾಗೂ ಶಾಂತಿ ಮಂತ್ರ ಹಾಡಲಾಯಿತು.