

ಮಡಿಕೇರಿ:
ಜಿಲ್ಲೆಯ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ಕೂಲಿ ಕಾರ್ಮಿಕ ವಸತಿರಹಿತರಿಗೆ ನಿವೇಶನ ಮತ್ತು ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕೊಡಗು ಸಮಿತಿ ವತಿಯಿಂದ ಶುಕ್ರವಾರ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿಭಟನಾಕಾರರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಕೆಎಸ್‌ಆರ್‌ಟಿಸಿ ಡಿಪೋ, ಜ. ತಿಮ್ಮಯ್ಯ ವೃತ್ತ, ಮಂಗೇರಿರರ ಮುತ್ತಣ್ಣ ವೃತ್ತಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮೆರವಣಿಗೆಯುದ್ದಕ್ಕೂ ವಿವಿಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ನಮ್ಮ ಭೂಮಿ ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು. ನಿವೇಶನ ಭಿಕ್ಷೆ ಅಲ್ಲ, ನಮ್ಮ ಹಕ್ಕು ಎಂದು ಘೋಷಣೆಗಳನ್ನು ಕೂಗಿದರು. ಜಿಲ್ಲೆಯ ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ಜಾತಿಗಳು ತೀರಾ ಧಮನಕ್ಕೆ ಒಳಗಾಗಿವೆ. ಈ ಬಡ ಜನರನ್ನು ಅತ್ಯಂತ ಕೀಳಾಗಿ ಗುಲಾಮರಂತೆ ಕಾಣಲಾಗುತ್ತಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಕಾರ್ಮಿಕರನ್ನು ಸಾಲು ಮನೆಗಳಲ್ಲಿ ಕೂಡಿ ಹಾಕಿ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಜೀತಗಾರರನ್ನು ಗುರುತಿಸಿ ಅವರನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸಿ ಪರ್ಯಾತ ಪುನರ್ವಸತಿ ಕಲ್ಪಿಸಬೇಕು, ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ವಸತಿ ಮತ್ತು ನಿವೇಶನ ವಂಚಿತರಿಗೆ ನಿವೇಶನ ಒದಗಿಸಬೇಕು ಸೇರಿದಂತೆ ವಿವಿಧ 10 ಬೇಡಿಕೆಗಳನ್ನು ಒಳಗೊಂಡ ಹಕ್ಕೋತ್ತಾಯವನ್ನು ಈ ಸಂದರ್ಭ ಮಂಡಿಸಲಾಯಿತು.
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕೊಡಗು ಸಮಿತಿ ಅಧ್ಯಕ್ಷ ಮೊಣ್ಣಪ್ಪ,
ಉಪಾಧ್ಯಕ್ಷ ಕಿರಣ್ ಜಗದೀಶ್ ಪದಾಧಿಕಾರಿಗಳಾದ ಸುಜಾತ, ಪಿ.ಐ. ಸಂಜೀವ, ಕೆ.ಎಸ್. ಸೋಮಯ್ಯ
ಪಿ.ಆರ್. ಮಂಜುಳಾ ಸೇರಿದಂತೆ ಮುಖಂಡರು, ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.