

ಕುಶಾಲನಗರ:
ಬೀದರ್ ಮತ್ತು ಶಿವಮೊಗ್ಗದಲ್ಲಿ ಸಿ.ಇ.ಟಿ. ಪರಿಕ್ಷಾರ್ಥಿಗಳಿಗೆ ಜನಿವಾರ ತೆಗೆದು ಪರೀಕ್ಷಾ ಕೊಠಡಿಗೆ ಬರ ಹೇಳುವ ಮೂಲಕ ಮಾನಸಿಕ ಹಿಂಸೆ ನೀಡಿದ ಘಟನೆ ಖಂಡಿಸಿ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕುಶಾಲನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಶ್ರೀ ಗಣಪತಿ ದೇವಾಲಯದ ಎದುರು ಜಮಾಯಿಸಿದ ಪ್ರತಿಭಟನಾಕಾರರು ನೊಂದ ಪರೀಕ್ಷಾರ್ಥಿಗಳಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು. ಬ್ರಾಹ್ಮಣ ಸಮುದಾಯದ ಮೇಲಿನ ಇಂಥ ವರ್ತನೆಯನ್ನು ಇದೇ ವೇಳೆ ಖಂಡಿಸಲಾಯಿತು.
ಈ ಪ್ರಕರಣಗಳು ಅಮಾನವೀಯ ಎಂದು ಪ್ರತಿಭಟನಾಕಾರರು ನೋವು ತೋಡಿಕೊಂಡರು.
ಈ ವೇಳೆ ಮಾತನಾಡಿದ ಕುಶಾಲನಗರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್. ರಾಜಶೇಖರ್, ಬೀದರ್ ಮತ್ತು ಶಿವಮೊಗ್ಗದಲ್ಲಿ ನಡೆದ ಪ್ರಕರಣಗಳಿಂದ ಆ ಯುವಕರ ಮನಸ್ಸಿಗೆ ಆಘಾತವಾಗಿದೆ. ಇದು ಬ್ರಾಹ್ಮಣ ಸಮುದಾಯಕ್ಕೆ ಮಾತ್ರವಲ್ಲದೆ ಹಿಂದೂ ಧರ್ಮೀಯರ ಧಾರ್ಮಿಕ ನಂಬಿಕೆಗೆ ಮಾಡಿದ ಅವಮಾನವಾಗಿದೆ.
ಈ ಪ್ರಕರಣವನ್ನು ಕುಶಾಲನಗರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ ಕಟುವಾಗಿ ಖಂಡಿಸುತ್ತದೆ. ಇಂಥ ವರ್ತನೆ ತೋರಿಸಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಪರೀಕ್ಷಾ ವಂಚಿತರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ನಂತರ ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿ ತನಕ ತೆರಳಿ ತಹಸೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಪ್ರತಿಭಟನಾ ಪತ್ರ ನಿಡಲಾಯಿತು. ಕುಶಾಲನಗರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಅನಿಲ್ ಶೇಷಾದ್ರಿ, ನಿರ್ದೇಶಕರಾದ ಎಂ.ವಿ. ನಾರಾಯಣ, ಎನ್.ಕೆ. ಮೋಹನ್ ಕುಮಾರ್, ರಮಾ ವಿಜಯೇಂದ್ರ, ರಜನಿ ಪ್ರದೀಪ್, ಕೆ.ಬಿ. ಗಿರೀಶ್. ಎಂ.ವಿ. ಸತೀಶ್, ಆರ್.ಕೆ. ನಾಗೇಂದ್ರ ಬಾಬು ಮತ್ತಿತರರು ಇದ್ದರು.