ವಿಷ ಸೇವಿಸಿ ರೈತ ಆತ್ಮಹತ್ಯೆ ಯತ್ನ!

protest
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟ ಉಗ್ರರೂಪ ಪಡೆದಿದ್ದು, ಪ್ರತಿಭಟನಾನಿರತ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ನಡೆದಿದೆ.

ಚನ್ನರಾಯಪಟ್ಟಣದ ರೈತ ವೆಂಟೇಶ್ ಎಂಬುವರು ಅನ್ನದ ಜತೆಗೆ ಕೀಟನಾಶಕ ಬೆರೆಸಿ ಸೇವಿಸಿದ್ದಾರೆ ಎನ್ನಲಾಗಿದ್ದು ಅಸ್ಪಸ್ಥಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಉಸ್ತುವಾರಿ ಮಂತ್ರಿ ವಿರುದ್ಧ ಕಿಡಿ: ರೈತರ ವಿರುದ್ಧ ಪೊಲೀಸರನ್ನು ಎತ್ತಿಕಟ್ಟಿ ರೈತ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಸಚಿವರನ್ನು ಭೇಟಿ ಮಾಡಿ ಹೋರಾಟಕ್ಕೆ ತಾರ್ಕಿಕ ಅಂತ್ಯ ಪಡೆಯಬೇಕೆಂಬ ಉದ್ದೇಶದಿಂದ ಹೊರಟಿದ್ದ ರೈತ ಹೋರಾಟಗಾರರನ್ನು ತಡೆದ ಪೊಲೀಸರು ಸಚಿವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಲಿಲ್ಲ ಎಂಬುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಕೆರಳಿದ ಹೋರಾಟಗಾರರು ಪೊಲೀಸರ ವರ್ತನೆ ವಿರುದ್ಧ ೋಷಣೆ ಕೂಗಿದರು. ಈ ವೇಳೆ ಪೊಲೀಸರು ಹಾಗೂ ರೈತ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ಸಿಎಂ ಮಧ್ಯೆ ಪ್ರವೇಶಿಸಬೇಕು: ಕಳೆದ ಚುನಾವಣೆ ವೇಳೆಯಲ್ಲಿ ಮತ ಬಹಿಷ್ಕಾರಕ್ಕೆ ಮುಂದಾದ ವೇಳೆ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ಹೋರಾಟಗಾರರನ್ನು ಭೇಟಿ ಮಾಡಿ ಚುನಾವಣೆ ಬಳಿಕ ರೈತರ ಪರ ನಿರ್ಧಾರ ಪ್ರಕಟಿಸುವ ಬಗ್ಗೆ ಭರವಸೆ ನೀಡಿದ್ದರು. ಅವರ ಭರವಸೆಯಂತೆ ಮತದಾನ ಮಾಡಿ ನಮ್ಮ ಕರ್ತವ್ಯ ಪಾಲಿಸಿದ್ದೇವೆ, ಆದರೆ ಅದಾದ ಬಳಿಕ ಇದುವರೆಗೆ ಯಾರೂ ನಮ್ಮ ಕಡೆ ತಿರುಗಿಯೂ ನೋಡಿಲ್ಲ. ಈ ಬಾರಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಮಧ್ಯೆ ಪ್ರವೇಶಿಸಿ ನಮ್ಮ ಹೋರಾಟಕ್ಕೆ ಜಯ ದೊರಕಿಸಿಕೊಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಎರಡು ಕಡೆ ಧರಣಿ: ಗುರುವಾರ ಚನ್ನರಾಯಪಟ್ಟಣ ಹಾಗೂ ದೇವನಹಳ್ಳಿ ಪಟ್ಟಣದಲ್ಲಿ ಎರಡು ಕಡೆ ರೈತ ಹೋರಾಟಗಾರರು ಬೆಂಗಳೂರಿಗೆ ತೆರಳಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಉದ್ದೇಶಿಸಿದ್ದರು. ಹೋರಾಟಗಾರರು ಸಭೆ ಸೇರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬೆಂಗಳೂರಿಗೆ ತೆರಳದಂತೆ ತಡೆದರು, ಕೆಲವರನ್ನು ಬಂಧಿಸಿ ಬಿಡುಗಡೆ ಮಾಡುವ ಪ್ರಹಸನ ನಡೆಸಿದರು. ಇದರಿಂದ ಕೆರಳಿದ ಹೋರಾಟಗಾರರು ಪೊಲೀಸರು ತಡೆದ ಜಾಗದಲ್ಲಿಯೇ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

ಭೂಸ್ವಾಧೀನಕ್ಕೆ ನೋಟಿಸ್! ರೈತ ಹೋರಾಟಗಾರರನ್ನು ಮನವೊಲಿಸುವ ಕೆಲಸಕ್ಕೆ ಮುಂದಾದ ಪೊಲೀಸರ ವಿರುದ್ಧ ತಿರುಗಿ ಬಿದ್ದ ಹೋರಾಟಗಾರರು ನಮ್ಮ ಸಮಾಧಿ ಮೇಲೆ ಅವರು ಕೈಗಾರಿಕೆ ಕಟ್ಟಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವರೊಂದಿಗೆ ಸಭೆ ನಡೆಸಲು ಇಷ್ಟುದೊಡ್ಡ ಗುಂಪು ಹೋಗುವ ಅವಶ್ಯಕತೆ ಇಲ್ಲ ನಿಮ್ಮ 10 ಮಂದಿ ಮುಖಂಡರು ತೆರಳಬಹುದು ಎಂಬ ಪೊಲೀಸರ ಸಲಹೆಗೆ ವಿರೋಧ ವ್ಯಕ್ತಪಡಿಸಿದ ರೈತರು ಭೂಸ್ವಾಧೀನ ಪಡಿಸಿಕೊಳ್ಳಲು ನೋಟಿಸ್ ಕೊಟ್ಟಿರುವ ಪತ್ರ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು. ಉಸ್ತುವಾರಿ ಸಚಿವರು ಕೇವಲ ಹೋರಾಟಗಾರರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ. ನಮಗೆ ನ್ಯಾಯಕೊಡಿಸುವ ಭರವಸೆ ನೀಡಿ ಪರೋಕ್ಷವಾಗಿ ಅಧಿಕಾರಿಗಳ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಮುಂದುವರೆಸಿದ್ದಾರೆ ಎಂದು ದೂರಿದರು.

ನಾವೇನು ಕೊಲೆ ಮಾಡಿದ್ದೀವಾ? ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಹೊರಟಿದ್ದ ರೈತ ಮುಖಂಡರನ್ನು ರಸ್ತೆಯಲ್ಲಿಯೇ ತಡೆದ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು ನಾವೇನು ಕೊಲೆ ಮಾಡಿದ್ದೀವಾ ನಮ್ಮನ್ನು ಏಕೆ ಕ್ರಿಮಿನಲ್‌ಗಳಂತೆ ಕಾಣುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ಹೋರಾಟದಲ್ಲಿ ನನ್ನ ಸಹೋದರ ತೀರಿ ಹೋದ, ಅವನನ್ನು ಮತ್ತೆ ತರಲು ಸಾಧ್ಯವೇ ಎಂದು ಪ್ರಶ್ನಿಸಿದ ರೈತ ಹೋರಾಟಗಾರರೊಬ್ಬರು ಅಳಲು ತೋಡಿಕೊಂಡರು.

ಬೆಂಗಳೂರಿನಲ್ಲಿ ಕಣ್ತಪ್ಪಿಸಿದ್ದರು: ಕೆಲವು ದಿನಗಳ ಹಿಂದೆ ಕೆಲವೇ ರೈತ ಮುಖಂಡರು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ರೈತರೊಂದಿಗೆ ಮುಖಕೊಟ್ಟು ಮಾತನಾಡದ ಸಚಿವರು ಹಾರಿಕೆ ಉತ್ತರ ನೀಡುತ್ತಾ ರೈತರ ಕಣ್ತಿಪ್ಪಿಸಿ ಅಲ್ಲಿಂದ ಹೊರಟು ಹೋದರು ಗಂಟೆಗಟ್ಟಲೆ ಕಾದು ವಾಪಸ್ ಬರಬೇಕಾಯಿತು. ಕೆ.ಎಚ್.ಮುನಿಯಪ್ಪ ಅವರ ಮೇಲೆ ಸಾಕಷ್ಟು ಭರವಸೆ ಇತ್ತು. ಇತ್ತೀಚಿಗಿನ ಅವರ ವರಸೆ ಗಮನಿಸಿದರೆ ಅವರ ಮೇಲೆ ಯಾವುದೇ ನಂಬಿಕೆ ಬರದಂತಾಗಿದೆ ಎಂದು ರೈತ ಹೋರಾಟಗಾರರ ಕಾರಹಳ್ಳಿ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net