

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಚನ್ನರಾಯಪಟ್ಟಣ
ಕೃಷಿ ಭೂಮಿ ಭೂಸ್ವಾಧೀನ ಕೈಬಿಡುವಂತೆ ಹೋರಾಟ ನಡೆಸುತ್ತಿರುವ ರೈತರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಗಳೂರಿನ ಗೃಹಕಚೇರಿ ಬಳಿ ಭೇಟಿಯಾಗಿ ತಾರ್ಕಿಕ ಪರಿಹಾರ ಕಲ್ಪಿಸುವ ಬಗ್ಗೆ ಒತ್ತಾಯಿಸಿದ ವೇಳೆ ಸಚಿವರು ಹಾರಿಕೆ ಉತ್ತರ ನೀಡುತ್ತಾ ಹೋರಾಟಗಾರರ ಕಣ್ತಪ್ಪಿಸಿ ಸ್ಥಳದಿಂದ ಹೊರಟೇಬಿಟ್ಟರು ಎಂಬ ಆರೋಪ ವ್ಯಕ್ತವಾಗಿದೆ.
ಇನ್ನೊಂದು ವಾರದಲ್ಲಿ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು. ಇದೇ ಮಾತನ್ನು ಎರಡು ವರ್ಷದಿಂದ ಹೇಳುತ್ತಿದ್ದೀರಿ ಎಂಬ ರೈತರ ಆಕ್ಷೇಪಕ್ಕೆ ಉತ್ತರ ನೀಡದೆ ಅಲ್ಲಿಂದ ಅವಸರವಾಗಿ ತೆರಳಿದರು. ಇದರಿಂದ ಬೇಸತ್ತ ಹೋರಾಟಗಾರರು ರೈತರ ಪರ ಎಂದು ಹೇಳುವ ಸಚಿವರು, ಪರೋಕ್ಷವಾಗಿ ರೈತ ವಿರೋಧ ಆದೇಶಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡುವುಗಳಿಗೆ ಬೆಲೆ ಇಲ್ಲವೇ? ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಶಾಶ್ವತ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯಾದಿಯಾಗಿ ಹಲವು ಜನಪ್ರತಿನಿಧಿಗಳು ರೈತರ ಪರವಾಗಿ ನಿಲ್ಲುತ್ತೇವೆ ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇವೆ ಎಂದು ಹೇಳುತ್ತಿದ್ದಾರೆ, ಅದೇ ರೀತಿ ಪ್ರತಿ ಬಾರಿ ಗಡುವು ನೀಡುತ್ತಿದ್ದಾರೆ. ಅಷ್ಟರೊಳಗೆ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗಲಿದೆ ಎಂದು ಭರವಸೆ ನೀಡುತ್ತಿದ್ದಾರೆ ಹೊರತು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಮುಖಂಡರಾದ ಕಾರಳ್ಳಿ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಅಂತಿಮ ತೀರ್ಮಾನ: ಉಸ್ತುವಾರಿ ಸಚಿವರು ರೈತರ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಂಬಂಧ ಭಾನುವಾರ ಅಂತಿಮ ಸುತ್ತಿನ ಸಭೆ ನಡೆಸಲು ಹೋರಾಟಗಾರರು ತೀರ್ಮಾನಿಸಿದ್ದಾರೆ. ಜಿಲ್ಲಾಧಿಕಾರಿ, ಸಚಿವರಿಗೆ ನೀಡಿದ ಗಡುವು ಮುಗಿದಿದೆ, ಇನ್ನು ಕಾಯಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಹೋರಾಟಗಾರರು ಹೋರಾಟದ ರೂಪುರೇಷೆ ಬದಲಿಸಲು ಸಜ್ಜಾಗಿದ್ದಾರೆ.
ಡಿಸಿ ಕಚೇರಿ ಎದುರು ಧರಣಿಗೆ ಸಿದ್ದತೆ: ಜಿಲ್ಲಾಧಿಕಾರಿ ಆವರಣದಲ್ಲಿ ಚನ್ನರಾಯಪಟ್ಟಣ ರೈತರು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿ ಮಂತ್ರಿಗಳನ್ನು ಸಂಪರ್ಕಿಸಿ ವಾರದ ಅವಧಿಯಲ್ಲಿ ರೈತರ ಸಮಸ್ಯೆ ಬಗೆಹರಿಸಲಾಗುತ್ತದೆ ಎಂಬ ಭರವಸೆ ನೀಡಿದ್ದರು. ರೈತರಿಗೆ ಸಿಹಿಸುದ್ದಿ ಬರಲಿದೆ ಎಂಬ ಭರವಸೆ ನೀಡಿ, ರೈತರು ಧರಣಿ ಕೈಬಿಡುವಂತೆ ಮನವೊಲಿಸಿದ್ದರು. ನಂತರದಲ್ಲಿ ಖನಿಜ ಭವನದಲ್ಲಿ ಮಂತ್ರಿ ಗಳೊಂದಿಗೆ ರೈತರ ಸಭೆ ಕರೆದು ಮಾತುಕತೆಗೆ ಅನುವು ಮಾಡಿಕೊಟ್ಟಿದ್ದರು. ಆದರೆ ಖನಿಜ ಭವನದ ಸಭೆಯಲ್ಲಿ ಮಂತ್ರಿಗಳು ಯಾವುದೇ ಚರ್ಚೆ ನಡೆಸದೆ, ರೈತರ ಒತ್ತಾಯವನ್ನು ಕೇಳಿದ್ದೇವೆ, ಒಂದು ವಾರದಲ್ಲಿ ಸರ್ಕಾರದ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೇಳಿದರು. ಆದರೆ ಇಂದಿನವರೆಗೂ ಯಾವುದೇ ನಿರ್ಧಾರ ಪ್ರಕಟವಾಗಿಲ್ಲ, ಇನ್ನೂ ಕಾಯುತ್ತಾ ಕುಳಿತಿರಲು ಸಾಧ್ಯವಿಲ್ಲ, ಜಿಲ್ಲಾಧಿಕಾರಿ ಕಚೇರಿ ಮುಂದೆ ತಾತ್ಕಾಲಿಕವಾಗಿ ಹಿಂದೆ ತೆಗೆದುಕೊಂಡಿದ್ದ ಹೋರಾಟವನ್ನು ಮುಂದುವರೆಸಲೇಬೇಕು ಎಂದು ಹೋರಾಟಗಾರರು ಶನಿವಾರದ ಸಭೆಯಲ್ಲಿ ತೀರ್ಮಾನ ಕೈಗೊಂಡರು.
ಹೋರಾಟಕ್ಕೆ 3 ವರ್ಷ: ಸಾಲು ಸಾಲು ರಜೆಗಳಿರುವ ಕಾರಣ ಒಂದೆರಡು ದಿನಗಳ ಗಡುವು ನೀಡಿ ಕೆಐಎಡಿಬಿ ಅಧಿಕಾರಿಗಳು, ಮಂತ್ರಿಗಳನ್ನು ಸಂಪರ್ಕಿಸಿ ಒತ್ತಡ ಹೇರುವುದು, ಯಾವುದೆ ಆದೇಶ ಬರದಿದ್ದರೆ, ಎಲ್ಲ ಹೋರಾಟಗಾರರು ಸಭೆ ಸೇರಿ ಹಿಂತೆಗೆದುಕೊಂಡ ಹೋರಾಟವನ್ನು ಉಗ್ರವಾಗಿ ಮುಂದುವರೆಸಲು ನಿರ್ಧರಿಸಲಾಯಿತು.
ಭೂಸ್ವಾಧೀನ ಕೈಬಿಡುವಂತೆ ಹಲವು ಹೋರಾಟಗಳನ್ನು ಮಾಡಿದ್ದೇವೆ, ಸಮಸ್ಯೆ ಬಗೆಹರಿಸಿ ರೈತರ ಪರವಾನಿ ನಿಲ್ಲುತ್ತೇವೆ ಎಂದು ಹಲವು ಬಾರಿ ಮನವೊಲಿಸಿರುವ ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಸಮಿತಿ ಸದಸ್ಯರು ತೆರಳಿದ್ದರು. ಆದರೆ ಹಾರಿಕೆ ಉತ್ತರ ನೀಡಿ ಮತ್ತೆ ವಾರದ ಗಡುವು ನೀಡಿ ಅಲ್ಲಿಂದ ಅವರಸರವಾಗಿ ತೆರಳಿದರು. ಇದು ಕೇವಲ ಕಾಲಹರಣ ಮಾಡುವಂತಿದೆ. ಆದ್ದರಿಂದ ಮುಂದಿನ ಹೋರಾಟದ ರೂಪುರೇಷೆ ಸಿದ್ದಗೊಳಿಸುತ್ತಿದ್ದೇವೆ.
ಕಾರಹಳ್ಳಿ ಶ್ರೀನಿವಾಸ್, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ