

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಪ್ರಜಾಪ್ರಭುತ್ವದಲ್ಲಿ ಡಾ.ಅಂಬೇಡ್ಕರ್ ಅವರ ಸರ್ವರಿಗೂ ಸಮಪಾಲು ಸಮ ಬಾಳು ಎಂಬ ಆಶಯದಡಿ ಆಡಳಿತ ನಡೆಸಬೇಕು. ಆದರೆ ಇಂದಿನ ಆಡಳಿತ ವರ್ಗ ಹಿಂದುಳಿದ ಸಮುದಾಯಗಳನ್ನು ಅಭಿವೃದ್ಧಿಪಡಿಸುವುದನ್ನು ಬಿಟ್ಟು ಕೆಲವು ಸೀಮಿತ ಸಮುದಾಯಗಳ, ಅಲ್ಪಸಂಖ್ಯಾತರ ಅಭಿವೃದ್ಧಿ ಮಾಡಿ ಮತ ಓಲೈಕೆಯ ರಾಜಕಾರಣ ಮಾಡುತ್ತಿದ್ದಾರೆ. ಅವರಿಗಾಗಿ ರಾಜ್ಯ ಡಿಸಿಎಂ ಸಂವಿಧಾನ ತಿದ್ದುಪಡಿಯ ಹೇಳಿಕೆ ಮುಂದಿಟ್ಟಿರುವುದು ಖಂಡನೀಯವಾದದ್ದು, ಅದನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಒತ್ತಾಯಿಸಿದರು.
ದೇವನಹಳ್ಳಿ ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಂವಿಧಾನ ತಿದ್ದುಪಡಿ ಮಾಡಿ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.4 ಮೀಸಲಾತಿ ನೀಡುತ್ತೇನೆ ಎಂದು ಹೇಳಿಕೆ ನೀಡಿರುವುದರ ವಿರುದ್ಧ ಮಂಗಳವಾರ ನಡೆಸಲಾದ ಪ್ರತಿಭಟನೆಯಲ್ಲಿ ಮಾತನಾಡಿದರು. ಜನರ ದಿಕ್ಕು ತಪ್ಪಿಸುವ ಹೇಳಿಕೆ ನೀಡುವುದು ವಿಷಾದನೀಯ. ಪಕ್ಷದ ಆದೇಶದಂತೆ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ಸಂವಿಧಾನ ವಿರೋಧಿ ಹೇಳಿಕೆ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿ ಮತ್ತು ಗ್ರಾಮಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಂವಿಧಾನ ವಿರೋಧಿ ಹೇಳಿಕೆ: ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ಡಿಕೆಶಿ ಸಂವಿಧಾನ ವಿರೋಧಿ ಭಾಷಣ ದೆಹಲಿಯಲ್ಲಿ ಮಾಡುತ್ತಾರೆ ಎಂದರೆ ಎಷ್ಟರ ಮಟ್ಟಿಗೆ ರಾಜ್ಯದ ಜನತೆಯಲ್ಲಿ ಅಸಮಾನತೆ ಭಾವನೆ ಮೂಡಿಸುತ್ತಿದ್ದಾರೆ. ರಾಜ್ಯ ಸರ್ಕಾರ ನಡೆಸುವ ನೀವು ಸಂವಿಧಾನ ವಿರೋಧಿ ಹೇಳಿಕೆ ನೀಡಬಾರದು. ಅದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್ ಮಾತನಾಡಿ, ರಾಜ್ಯದ ಪ್ರತಿ ಮಂಡಲದಲ್ಲಿ ಇಂದು ಭ್ರಷ್ಟ ಹೇಳಿಕೆ ನೀಡಿದ ಡಿಸಿಎಂ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 2 ವರ್ಷ ಕಳೆದರು ಅವರ ಗ್ಯಾರೆಂಟಿ ಯೋಜನೆ ಪೂರೈಸುವಲ್ಲಿ ನಿರತರಾಗಿದ್ದಾರೆ ಹೊರತು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಕೇವಲ ಮಾತಿಗೆ ಬಡವರ ಪರ ಎಂದು ಹೇಳಿ ಜನಸಾಮಾನ್ಯರ ದಿನನಿತ್ಯ ಬಳಸುವ ವಿದ್ಯುತ್, ಸರಕು, ಸಾಗಾಣಿಕೆ ಸೇರಿ ಎಲ್ಲ ವಸ್ತುಗಳ ಮೇಲೆ ದರ ಗಗನಕ್ಕೇರಿಸಿದ್ದಾರೆ. ಕಾಂಗ್ರೆಸ್ ಬಿಜೆಪಿ ಶಾಸಕರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಗ್ರಹಿಸಿದರು. ತಾಲೂಕು ಮಂಡಲ ಅಧ್ಯಕ್ಷ ಅಂಬರೀಶ್ ಗೌಡ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.