

ಬೆಳ್ತಂಗಡಿ: ಸುಳ್ಳು ಆರೋಪ ಹೊರಿಸಿ ಕ್ಷೇತ್ರದ ಮಾನಹಾನಿ ಮಾಡುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಅಗತ್ಯ ಕಾನೂನು ಕ್ರಮಕ್ಕೆ ಆಗ್ರಹಿಸಿ ಮಾ.27ರಂದು ಬೆಳಗ್ಗೆ 10ಕ್ಕೆ ಧರ್ಮಸ್ಥಳದಲ್ಲಿ ಒಂದು ದಿನದ ಹರತಾಳ, ಪ್ರತಿಭಟನಾ ಸಭೆ ನಡೆಸಲಿದ್ದೇವೆ ಎಂದು ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೇಶವ ಬೆಳಾಲು ಹೇಳಿದರು.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನ ಷಡ್ಯಂತ್ರ ಮಾಡಿದಲ್ಲಿ ಯಾವ ಬೆಲೆ ತೆತ್ತಾದರೂ ನಮ್ಮ ಗ್ರಾಮ, ಕ್ಷೇತ್ರದ ಗೌರವ ಉಳಿಸುವಲ್ಲಿ ಬದ್ಧರಾಗಿದ್ದೇವೆ. ಕೆಲದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಯೂಟ್ಯೂಬ್, ಫೇಸ್‌ಬುಕ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಆಧಾರರಹಿತ ಮಾಹಿತಿ ಹರಿದಾಡುತ್ತಿದೆ. ಇದರಿಂದ ನಮ್ಮ ಗ್ರಾಮದ ಘನತೆಗೆ ಹಾನಿಯಾಗಿದೆ. ಮುಖ್ಯವಾಗಿ ಸೌಜನ್ಯಾ ಪ್ರಕರಣ ಮುಂದಿರಿಸಿ ಕ್ಷೇತ್ರದ ತೇಜೋವಧೆ ಮಾಡಲಾಗುತ್ತಿದೆ. ಸೌಜನ್ಯಾ ಪ್ರಕರಣಕ್ಕೂ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ. ಕೆಲ ಸ್ಥಾಪಿತ ಹಿತಾಸಕ್ತಿಗಳು ಪ್ರಕರಣದಲ್ಲಿ ಕ್ಷೇತ್ರದ ತೇಜೋವಧೆ ಮಾಡುತ್ತಿದ್ದಾರೆ. ಈ ಕುಕೃತ್ಯ ಧರ್ಮಸ್ಥಳ ಗ್ರಾಮದವರಾದ ನಮಗೆ ಮುಜುಗರ ತರುವಂತೆ ಮಾಡಿದೆ. ಸೌಜನ್ಯಾ ಪ್ರಕರಣದ ನಿಷ್ಪ್ಪಕ್ಷಪಾತ ತನಿಖೆಗೆ ಧರ್ಮಸ್ಥಳ ಗ್ರಾಮದ ನಿವಾಸಿಗರು ಆರಂಭದಿಂದಲೂ ಆಗ್ರಹಿಸುತ್ತಾ ಬಂದಿದ್ದೇವೆ. ಆದರೆ ಇದೇ ವಿಚಾರ ಮುಂದಿಟ್ಟು ಸಂವಿಧಾನ ಬಾಹಿರವಾಗಿ ಕ್ಷೇತ್ರದ ತೇಜೋವಧೆ ಮಾಡುವುದನ್ನು ಧರ್ಮಸ್ಥಳ ಗ್ರಾಮಸ್ಥರು ಖಂಡಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಧನಕೀರ್ತಿ ಆರಿಗ, ಕೋಶಾಧಿಕಾರಿ ಶ್ರೀನಿವಾಸ್ ರಾವ್, ಧರ್ಮಸ್ಥಳ ಗ್ರಾಪಂ ಅಧ್ಯಕ್ಷೆ ವಿಮಲಾ, ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಧರ್ಮಸ್ಥಳ ಸಿಎ ಬ್ಯಾಂಕ್ ಅಧ್ಯಕ್ಷ ಪ್ರೀತಂ ಡಿ., ಉಪಾಧ್ಯಕ್ಷ ಅಜಿತ್ ಜೈನ್, ವರ್ತಕರ ಸಂಘ ಪ್ರತಿನಿಧಿ ಭವಾನಿ ಶಂಕರ್ ರಾವ್, ವಾಹನ ಮಾಲೀಕ ಚಾಲಕ ಸಂಘ ಪ್ರತಿನಿಥಿ ನೀಲಕಂಠ ಶೆಟ್ಟಿ, ಉದ್ಯಮಿಗಳಾದ ಅಖಿಲೇಶ್, ಶೃತಾಂಜನ್ ಜೈನ್ ಉಪಸ್ಥಿತರಿದ್ದರು.
ಸುಳ್ಳು ಆರೋಪ ಹೊರಿಸಿ, ಕ್ಷೇತ್ರದ ಮಾನಹಾನಿ ಮಾಡುವ ಮೂಲಕ ಧರ್ಮಸ್ಥಳ ಗ್ರಾಮದ ನಿವಾಸಿಗಳಿಗೆ ಮುಜುಗರ ತರುತ್ತಿರುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಕಾನೂನು ಕ್ರಮವಾಗಬೇಕು. ಸರ್ಕಾರದ ಮುಂದೆ ಈ ಆಗ್ರಹ ಮುಂದಿರಿಸಿ ಒಂದು ದಿನದ ಹರತಾಳ, ಪ್ರತಿಭಟನಾ ಸಭೆ ನಡೆಸಲಿದ್ದೇವೆ. ನಡೆಯುವ ಸಭೆ ಸಾಂಕೇತಿಕ ಆರಂಭ. ಕೇಶವ ಬೆಳಾಲು, ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ https://www.vijayavani.net/vishwa-rangabhumi-dina https://www.vijayavani.net/prize-in-inter-college-debate-competition