ಶಂಭೂರು ನೇಮೋತ್ಸವಕ್ಕಾಗಿ ಗ್ರಾಮಸ್ಥರ ಪ್ರತಿಭಟನೆ : ಅಷ್ಟಮಂಗಳ ಪ್ರಶ್ನೆಯ ಸಂದರ್ಭ ದಾಂಧಲೆ ನಡೆಸಿ ದೈವಜ್ಞರಿಗೆ ನಿಂದನೆ ಆರೋಪ

New Project (9)
Published on

ಬಂಟ್ವಾಳ: ಶಂಭೂರು ಗ್ರಾಮದ ಶ್ರೀ ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ ಶ್ರೀ ಧರ್ಮರಸು ದೈವಂಗಳು ಅಲಂಗಾರ ಮಾಡ ಬರ್ಕೆ ಹಾಗೂ ವೈದ್ಯನಾಥ ಜುಮಾದಿ ಬಂಟ ದೈವಸ್ಥಾನ ದಿಂಡಿಕೆರೆ ಜೋಡುಸ್ಥಾನದಲ್ಲಿ ನೇಮೋತ್ಸವ ನಡೆಸಲು ಅವಕಾಶ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಮಧ್ಯಾಹ್ನ ಬಿ.ಸಿ.ರೋಡ್‌ನ ತಾಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ದೈವಸ್ಥಾನಕ್ಕೆ ಸಂಬಂಧಪಟ್ಟ ದೈವಗಳ ನೇಮೋತ್ಸವ ಅನಾದಿ ಕಾಲದಿಂದ ಮೂರು ಕಡೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ಊರ ಪರವೂರ ಭಕ್ತರಿಂದ ಕಾಣಿಕೆ ರೂಪದಲ್ಲಿ ಹರಕೆ ಬರುತ್ತಿತ್ತು. ಈ ಗ್ರಾಮದಲ್ಲಿ ದೈವಗಳಿಗೆ ಸಂಬಂಧಪಟ್ಟ ಗುರಿಕಾರ ಮನೆಗಳು ಹಾಗೂ ಎರಡು ಭಂಡಾರದ ಮನೆಗಳು ಅಲ್ಲದೆ ಒತ್ತು ಮನೆಗಳಾಗಿ 16 ಮನೆಗಳು ಇದ್ದು, ಊರಿನವರು ಗುತ್ತಿನವರು ಸೇರಿ ವಿಜೃಂಭಣೆಯಿಂದ ನೇಮೋತ್ಸವ ನಡೆಯುತ್ತಿತ್ತು.

ಗ್ರಾಮದಲ್ಲಿರುವ ದೈವಗಳ ದೈವಸ್ಥಾನವನ್ನು ದೈವಗಳ ಅಪ್ಪಣೆಯಂತೆ ಕೊಪ್ಪಲ, ಕೊಡಂಟಿಯಡ್ಕ ಹಾಗೂ ಇರಂತಬೆಟ್ಟು ದೈವದ ಚಾವಡಿ ಹಾಗೂ ದಿಂಡಿಕೆರೆ ಜೋಡುಸ್ಥಾನವನ್ನು ಗ್ರಾಮಸ್ಥರು, ದಾನಿಗಳ ಸಹಾಯದಿಂದ ಜೀರ್ಣೋದ್ಧಾರ ಸಮಿತಿ ಮಾಡಿ ಆಡಳಿತ ಸಮಿತಿ ರಚಿಸಿ ನೇಮೋತ್ಸವ ನಡೆಸಲಾಗಿತ್ತು. ಈ ಸಂದರ್ಭ ಸಮಿತಿಯವರ ಮೇಲೆ ಇರಂತಬೆಟ್ಟು ಕುಟುಂಬಸ್ಥರು ನಿಷೇಧಾಜ್ಞೆ ತಂದು ದೈವಸ್ಥಾನವು ತಮ್ಮ ಕುಟುಂಬ ದೈವವೆಂದು ಪ್ರತಿಪಾದಿಸಿ ಸಮಿತಿಯವರಿಂದ 2016 ರಲ್ಲಿ ಬಲತ್ಕಾರವಾಗಿ ಅಧಿಕಾರ ವಶಪಡಿಸಿ ನೇಮೋತ್ಸವವಕ್ಕೆ ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತಾ.ಪಂ. ಮಾಜಿ ಉಪಾಧ್ಯಕ್ಷ ಆನಂದ ಶಂಭೂರು, ಕೇಶವ ಬರ್ಕೆ, ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್, ಹೇಮಚಂದ್ರ ಭಂಡಾರದ ಮನೆ, ನವೀನ್ ಕೋಟ್ಯಾನ್, ಗಣೇಶ್ ಪ್ರಸಾದ್ ಜೆ.ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಉಪತಹಸೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಹಲವು ವರ್ಷಗಳಿಂದ ಕಿರಿಕಿರಿ

ಕಳೆದ ಕೆಲವು ವರ್ಷಗಳಿಂದ ಇರಂತಬೆಟ್ಟು ಕುಟುಂಬಸ್ಥರು ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದು 2019ರಲ್ಲೂ ಸಂಧಾನ ಸಭೆಯ ಮೂಲಕ ನೇಮೋತ್ಸವ ಮುಂದುವರಿದಿತ್ತು. ಈ ಸಂದರ್ಭ ಇರಂತಬೆಟ್ಟು ಕುಟುಂಬದ ಕೆಲವರು ಸೇರಿ ವೈದ್ಯನಾಥ ಭಂಡಾರದ ಮನೆಯ ಬೀಗವನ್ನು ಒಡೆದಿದ್ದು ಇಷ್ಟದೇವತಾ ದೈವಸ್ಥಾನದ ಅಷ್ಟಮಂಗಳ ಪ್ರಶ್ನೆಯ ಸಂದರ್ಭ ದಾಂಧಲೆ ನಡೆಸಿ ದೈವಜ್ಞರಿಗೆ ನಿಂದನೆ ಮಾಡಿದ್ದಾರೆ. ಅಲ್ಲದೆ ನಾವೇ ಈ ಗ್ರಾಮದಲ್ಲಿ ಆಡಳಿತ ಮುಖ್ಯಸ್ಥರೆಂದು ದಬ್ಬಾಳಿಕೆ ಮಾಡುತ್ತಿದ್ದು, ಹಿಂದು ಧಾರ್ಮಿಕ ದತ್ತಿ ವ್ಯವಸ್ಥಾಪನಾ ಸಮಿತಿಗೆ ಅವಕಾಶ ಇದ್ದರೂ ನೇಮೋತ್ಸವ ನಡೆಸಲು ತಡೆ ಒಡ್ಡುತ್ತಿದ್ದಾರೆ. ಕೋರ್ಟ್‌ನ ಆದೇಶದಲ್ಲಿ ವ್ಯವಸ್ಥಾಪನಾ ಸಮಿತಿ ಬಗ್ಗೆ ಯಾವುದೇ ತಡೆಯಿಲ್ಲದಿದ್ದರೂ ಶಾಂತಿ ಸುವ್ಯವಸ್ಥೆಯ ನೆಪವೊಡ್ಡಿ ನೇಮೋತ್ಸವ ಆಚರಿಸದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದ್ದರಿಂದ ಅಧಿಕಾರಿ ವರ್ಗದವರು ಗ್ರಾಮಸ್ಥರನ್ನು ಸೇರಿಸಿಕೊಂಡು ನೇಮೋತ್ಸವ ನಡೆಸಲು ಅವಕಾಶ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net