ಗಣರಾಜ್ಯೋತ್ಸವದಂದು ಹಾರಲಿದೆ ಕಪ್ಪುಬಾವುಟ!

protest
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ನಾವು ಸಂವಿಧಾನ, ದೇಶ ವಿರೋಧಿಗಳಲ್ಲ, ಮೂಲಸೌಕರ್ಯ ಒದಗಿಸದ ಶುದ್ಧ ಕುಡಿವ ನೀರು ನೀಡದ, ಕೆರೆಗಳ ರಕ್ಷಣೆಗೆ ನಿರ್ಲಕ್ಷ್ಯಧೋರಣೆ ತಾಳಿರುವ ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟ..!

ದಶಕಗಳಿಂದ ಕೇಳಿಬರುತ್ತಿರುವ ಕೆರೆ ಸಂರಕ್ಷಣೆ ಕೂಗು ಮುಗಿಲುಮುಟ್ಟಿದ್ದು, ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಹೋರಾಟಗಾರರ ಕಿಚ್ಚು ರೊಚ್ಚಿಗೆದ್ದಿದೆ. ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕಿವಿಗೊಡದ ಹಿನ್ನೆಲೆಯಲ್ಲಿ ವಿನೂತನ ಪ್ರತಿಭಟನೆಗೆ ಮುಂದಾಗಿರುವ ಹೋರಾಟಗಾರರು ಜ.26 ರ ಗಣರಾಜ್ಯೋತ್ಸವದಂದು ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮನೆ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವ ಮೂಲಕ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ನಿರ್ಧಾರ ಕೈಗೊಂಡಿದ್ದಾರೆ.

ಸಲವಾಗದ ಸಂಧಾನ: ದೇವನಹಳ್ಳಿಯ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದಲ್ಲಿ ಗಣರಾಜ್ಯೋತ್ಸವ ಆಚರಿಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ. ಬೆಂಗಳೂರು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಧ್ವಜಾರೋಹಣ ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಇವೆರೆಡು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಈ ಹಿಂದೆಯೆ ಹಲವು ಬಾರಿ ಹೋರಾಟಗಾರರು ತಾಲೂಕು ಆಡಳಿತದ ಗಮನಕ್ಕೆ ತಂದಿದ್ದಾರೆ. ತಹಸೀಲ್ದಾರ್ ವಿಭಾ ರಾಥೋಡ್ ಹಾಗೂ ಇನ್ಸ್‌ಪೆಕ್ಟರ್ ಸಾದಿಕ್‌ಪಾಷಾ ಹೋರಾಟಗಾರರ ನಡುವೆ ಸಂಧಾನ ಮಾತುಕತೆ ನಡೆಸಿ ನಿರ್ಧಾರ ಕೈಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಹೋರಾಟಗಾರರಿಗೆ ಸಮರ್ಪಕ ಉತ್ತರವಾಗಲಿ ನಿಶ್ಚಿತ ಭರವಸೆಯಾಗಲಿ ಸಿಗದ ಹಿನ್ನೆಲೆಯಲ್ಲಿ ಸಂಧಾನ ವಿಲವಾಗಿದೆ.

ಕೆರೆಗಳಿಗೆ ತ್ಯಾಜ್ಯ ನೀರು: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರನ್ನು ಕೆರೆಗಳಿಗೆ ಹರಿದು ಬಿಡುತ್ತಿದ್ದಾರೆ. ಇಲ್ಲಿವರೆಗೂ ಸುಮಾರು 28 ಕ್ಕೂ ಹೆಚ್ಚು ಕಾರ್ಖಾನೆಗಳಲ್ಲಿ ಉತ್ಪತ್ತಿ ಆಗುವ ರಾಸಾಯನಿಕ ನೀರನ್ನು ಕೆರೆಗಳಿಗೆ ಹರಿದು ಬಿಡುತ್ತಿರುವುದನ್ನು ಫೋಟೋ ಮತ್ತು ವಿಡಿಯೊ ಸಮೇತ ಅಧಿಕಾರಿಗಳಿಗೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರೂ ಇಲ್ಲಿಯವರೆಗೂ ನೋಟಿಸ್ ನೀಡುವುದರಲ್ಲೇ ನಾಲ್ಕು ವರ್ಷಗಳಿಂದಲೂ ಕಾಲಾಹರಣ ಮಾಡಲಾಗುತ್ತಿದೆಯೆ ಹೊರತು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಮುಖ ಬೇಡಿಕೆಗಳು: 1.ದೊಡ್ಡಬಳ್ಳಾಪುರ ನಗರಸಭೆ ಯುಜಿಡಿ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಯುಜಿಡಿ ನೀರು ಮೂರನೇ ಹಂತದಲ್ಲಿ ಶುದ್ಧೀಕರಣಗೊಂಡು ಕೆರೆಗಳಿಗೆ ಬರುವಂತೆ ಕ್ರಮವಹಿಸಬೇಕು.

2.ಅಂತರ್ಜಲ ಹದಗೆಡದೆ ಇರುವ ಭಾಗದಿಂದ ಈ ಭಾಗದ ಜನರಿಗೆ ಶುದ್ಧ ಕುಡಿವ ನೀರು ಪೂರೈಸಬೇಕು.

3.ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಬೇಕು.

4. ಕೈಗಾರಿಕಾ ಪ್ರದೇಶಗಳಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಿ ಕೆರೆಗಳಿಗೆ ಆ ನೀರು ಬಿಡದೆ ಕೈಗಾರಿಕೆಗಳೇ ಆ ನೀರು ಮರುಬಳಕೆ ಮಾಡಬೇಕು.

ಹೋರಾಟದ ಸಮಯದಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡುತ್ತಾರೆ, ನಾಲ್ಕು ತಿಂಗಳಲ್ಲಿ ಎಸ್‌ಟಿಪಿ ಘಟಕ ಕೆಲಸ ಪ್ರಾರಂಭ ಮಾಡುವುದಾಗಿ ಹೇಳಿದ್ದರು.6 ತಿಂಗಳು ಕಳೆದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕಾಡನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸಿ ಕುಡಿಯುವ ನೀರು ಕೊಡುತ್ತೇವೆ ಎಂದು ನೀಡಲಾಗಿದ್ದ ಭರವಸೆಯು ಈಡೇರಿಲ್ಲ.

ಸತೀಶ್, ಹೋರಾಟ ಸಮಿತಿಯ ಮುಖಂಡ

ಬೆಂಗಳೂರಿನಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಬೇಕು. ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಿಂದ ಹರಿದು ಬರುತ್ತಿರುವ ಒಳಚರಂಡಿ ಕೊಳೆಚೆ ನೀರಿನ ವೈಜ್ಞಾನಿಕ ಶುದ್ಧೀಕರಣಕ್ಕೆ ಘಟಕ ಸ್ಥಾಪಿಸಬೇಕು. ಕಾಡನೂರು ಪಂಚಾಯಿತಿಯಲ್ಲಿ ತುರ್ತಾಗಿ ಕೊಳವೆಬಾವಿ ಕೊರೆಸಿ ಕುಡಿಯುವ ನೀರು ಸರಬರಾಜು ಮಾಡಬೇಕು. ರಾಸಾಯನಿಕ ನೀರು ಹೊರಗೆ ಹರಿದು ಬಿಡುವ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ವಸಂತ್ ಕುಮಾರ್, ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಹಾಗೂ ಕೆರೆ ಹೋರಾಟ ಸಮಿತಿ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net