ಬಸ್ ಪ್ರಯಾಣ ದರ ಏರಿಕೆಗೆ ಪ್ರತಿಭಟನೆ

New Project (12)
Published on

ಸುಳ್ಯ: ರಾಜ್ಯ ಸರ್ಕಾರ ಸಾರಿಗೆ ಬಸ್ ಪ್ರಯಾಣ ದರ ಏಕಾಏಕಿ ಶೇ.15 ಏರಿಸಿರುವುದನ್ನು ವಿರೋಧಿಸಿ ಎಸ್‌ಡಿಪಿಐ ರಾಜ್ಯಾದ್ಯಂತ ಹಮ್ಮಿಕೊಂಡ ಪ್ರತಿಭಟನೆ ಭಾಗವಾಗಿ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಮಂಗಳವಾರ ಗಾಂಧಿ ಪ್ರತಿಮೆಯ ಮುಂಭಾಗ ಪ್ರತಿಭಟನೆ ನಡೆಯಿತು.

ಸಮಿತಿ ಅಧ್ಯಕ್ಷ ಮೀರಾಝ್ ಸುಳ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮುಖಂಡ ಅಶ್ರಫ್ ಟರ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಲವಾರು ಉಚಿತ ಕೊಡುಗೆಗಳನ್ನು ಚುನಾವಣಾ ಪೂರ್ವದಲ್ಲಿ ಜನರಿಗೆ ವಾಗ್ದಾನ ಮಾಡಿ ಅಧಿಕಾರದ ಗದ್ದುಗೆ ಏರಿತು, ಈಗ ಸರ್ಕಾರದ ಖಜಾನೆಯೂ ಖಾಲಿಯಾಗಿದೆ, ಗ್ಯಾರಂಟಿ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ ಬಹುದೊಡ್ಡ ಹೊರೆಯಾಗಿದೆ. ಇದನ್ನು ಸರಿದೂಗಿಸಲು ಸರ್ಕಾರ ಬಡ ಮತ್ತು ಮಧ್ಯಮ ವರ್ಗದವರ ಬೆನ್ನಿನ ಮೇಲೆ ಗೆರೆ ಎಳೆದಂತೆ ಬಸ್ ಪ್ರಯಾಣ ದರ ಏರಿಕೆ ಮಾಡಿರುವುದು ಸರಿಯಲ್ಲ. ಹಾಗಾಗಿ ಈ ಕೂಡಲೇ ಶೇ.15 ಏರಿಸಿದ ಪ್ರಯಾಣದರ ರದ್ದು ಮಾಡಬೇಕೆಂದು ಒತ್ತಾಯಿಸಿದರು.

ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ರಫೀಕ್ ಎಂ.ಎ.ಸವಣೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್, ಪ್ರಮುಖರಾದ ಕಲಾಂ ಸುಳ್ಯ, ರಫೀಕ್ ಎಂ.ಎಸ್., ಶಾಕಿರ್, ಸಿದ್ದೀಕ್ ಸಿ.ಎ., ಅಜೀಜ್ ಕಚ್ಚು, ಅಬ್ದುಲ್ ರಹಮಾನ್ ಅಡ್ಕಾರು, ಅಲ್ತಾಫ್ ಕಲ್ಬರ್ಪೆ, ರಹೀಂ ಪೆರಾಜೆ, ಮುಸ್ತಫ ಚೆಂಗಳ ಹಾಜರಿದ್ದರು.

ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಸಿದ್ದಿಕ್ ಕೊಡಿಯಮ್ಮೆ ಸ್ವಾಗತಿಸಿದರು. ಸಮಿತಿ ಸದಸ್ಯ ಅಬ್ದುಲ್ ರಶೀದ್ ಗೂನಡ್ಕ ವಂದಿಸಿದರು. ಫಾರೂಕ್ ಕಾನಕ್ಕೋಡ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net