

ಕೋಲಾರ: ಸಂವಿಧಾನದಲ್ಲಿ ನೀಡಿರುವ ಮೂಲಹಕ್ಕು ಕಿತ್ತುಕೊಳ್ಳುವ ಪ್ರಯತ್ನಗಳು ಪೌರತ್ವದ ಮೂಲಕ ನಡೆಯುತ್ತಿರುವುದರಿಂದ ಈ ಬಗ್ಗೆ ಜನ ಎಚ್ಚೆತ್ತು ಕಾಯ್ದೆಯನ್ನು ವಿರೋಧಿಸಬೇಕು ಎಂದು ಸಾಹಿತಿ ಲಕ್ಷ್ಮೀಪತಿ ಕೋಲಾರ ಹೇಳಿದರು.
ನಗರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಸಹಬಾಳ್ವೆ ಬಲಗೊಳ್ಳಲಿ ಎಂಬ ಘೋಷಣೆಯಡಿ ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನದ ಭಾಗವಾಗಿ ಸೌಹಾರ್ದತೆಗಾಗಿ ಗಾಂಧಿವನದಿಂದ ನಚಿಕೇತ ನಿಲಯದವರೆಗೆ ಗುರುವಾರ ನಡೆಸಿದ ಮಾನವ ಸರಪಳಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯ ನಂತರ ಅಂಬೇಡ್ಕರ್ ರಚಿಸಿದ ಸಂವಿಧಾನದ ತಳಹದಿಯ ಮೇಲೆ ಜಾತ್ಯತೀತ ಭಾರತ ನಿಂತಿದೆ. ಇದೀಗ ಧರ್ಮಗಳ ಆಧಾರದಲ್ಲಿ ದೇಶವನ್ನು ಛಿದ್ರಗೊಳಿಸಲು ಕೇಂದ್ರ ಸರ್ಕಾರ ಹೊರಟಿದ್ದು, ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಪರೋಕ್ಷವಾಗಿ ಅವಮಾನಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಂಧೀಜಿ ಇಲ್ಲದ ಸ್ವಾತಂತ್ರ ಹೋರಾಟವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಗುಂಡಿಕ್ಕಿದ ಗೋಡ್ಸೆಯನ್ನು ಅಂದು ಯಾರೂ ಬೆಂಬಲಿಸಲಿಲ್ಲ. ಆದರೆ ಇಂದು ದೇಶಪ್ರೇಮ ದೂರವಾಗಿ ಗೋಡ್ಸೆ ಹಾಗೂ ಅವರ ಚಿಂತನೆಯನ್ನು ಸಮರ್ಥಿಸಿಕೊಳ್ಳುವ ಪ್ರೇಮಿಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಜನರ ಭಾವನೆ ಅರ್ಥ ಮಾಡಿಕೊಂಡು ಕಾಯ್ದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಜನವಾದಿ ಸಂಘಟನೆ ಉಪಾಧ್ಯಕ್ಷೆ ವಿ.ಗೀತಾ ಮಾತನಾಡಿ, ಕೋಮುವಾದಕ್ಕೆ ಪ್ರತಿಯಾಗಿ ಸಾಮರಸ್ಯ, ದ್ವೇಷಕ್ಕೆ ಪ್ರತಿಯಾಗಿ ಸ್ನೇಹ, ಕುತಂತ್ರಕ್ಕೆ ಪ್ರತಿಯಾಗಿ ಪ್ರಾಮಾಣಿಕತೆ ಎತ್ತಿ ಹಿಡಿಯಬೇಕು. ಸ್ನೇಹದ ಸಾಮರಸ್ಯದ ಸಂದೇಶವನ್ನು ಎಲ್ಲ ಭಾಗಗಳಲ್ಲಿ ಹರಡುವುದು ಶಾಂತಿಪ್ರಿಯರೆಲ್ಲರ ಕರ್ತವ್ಯವಾಗಬೇಕು. ಮಹಾತ್ಮಗಾಂಧಿ ಬಲಿಯಾದ ದಿನ ಕೈ-ಕೈ ಹಿಡಿದು ಅಖಂಡ ಮಾನವ ಸರಪಳಿ ನಿರ್ಮಿಸಿ ಶಾಂತಿ, ಸಾಮರಸ್ಯ ಕಾಪಾಡುವ ಪ್ರತಿಜ್ಞೆ ಸ್ವೀರಿಸಿ ಎಲ್ಲೆಡೆ ಸೌಹಾರ್ದ ಸಂದೇಶ ಹರಡೋಣ ಎಂದು ಆಶಯ ವ್ಯಕ್ತಪಡಿಸಿದರು.
ಗಾಂಧಿವನದಲ್ಲಿ ಗಾಂಧಿಪ್ರತಿಮೆಗೆ ಮಾಲಾರ್ಪಣೆ ಮಾಡಿ ಎಂಜಿ ರಸ್ತೆ, ಎಂಜಿ ಚೌಕ, ಅಮ್ಮವಾರಿ ಪೇಟೆ ಸರ್ಕಲ್, ಮೆಕ್ಕೆ ಸರ್ಕಲ್ ಮಾರ್ಗವಾಗಿ ನಚಿಕೇತನ ನಿಲಯಕ್ಕೆ ತೆರಳಿ ಅಂಬೇಡ್ಕರ್ ಪ್ರತಿಭೆಗೆ ಮಾಲಾರ್ಪಣೆ ಮಾಡಲಾಯಿತು.
ವಿವಿಧ ಸಂಘಟನೆಗಳ ಮುಖಂಡರಾದ ಪಿ.ಶ್ರೀನಿವಾಸ್, ಟಿ.ಎಂ.ವೆಂಕಟೇಶ್, ಗಾಂಧಿನಗರ ನಾರಾಯಣಸ್ವಾಮಿ, ಅಬ್ಬಣಿ ಶಿವಪ್ಪ, ನಳಿನಿಗೌಡ, ಆಸೀಫ್, ವಿಜಿಕೃಷ್ಣ, ಅಬ್ದುಲ್ ಖಯ್ಯೂಂ, ಸಾಬಿರ್ ಪಾಷಾ, ಪಂಡಿತ್ ಮುನಿವೆಂಕಟಪ್ಪ, ಸಲಾವುದ್ದೀನ್‌ಬಾಬು, ಇಕ್ಬಾಲ್ ಅಹಮದ್, ವಿಜಯಾಕುಮಾರಿ ಇತರರಿದ್ದರು.