ಕಬ್ಬಿನ ಬಾಕಿ ಹಣ ಬಿಡುಗಡೆಗೆ ಆಗ್ರಹ

06M.D.R.1
Published on

ಮದ್ದೂರು: ಕಬ್ಬಿನ ಬಾಕಿ ಹಣ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗೆ ಈಡೇರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಹಿರಿಯ ಮುಖಂಡ ಕೀಲಘಟ್ಟ ನಂಜುಂಡಯ್ಯ ಮಾತನಾಡಿ, ಸಕ್ಕರೆ ಕಾಯ್ದೆ ಪ್ರಕಾರ ಕಬ್ಬು ಸರಬರಾಜು ಮಾಡಿದ ರೈತರಿಗೆ 15 ದಿನದೊಳಗೆ ಕಬ್ಬಿನ ಬಾಕಿ ಹಣವನ್ನು ನೀಡಬೇಕು. ಆದರೆ 50 ದಿನ ಕಳೆದರೂ ಬಾಕಿ ಹಣ ನೀಡದೆ ರೈತರನ್ನು ವಿನಾಕಾರಣ ಅಲೆದಾಡಿಸಲಾಗುತ್ತಿದೆ. ಈ ಕೂಡಲೇ ಕಾಯ್ದೆ ಪ್ರಕಾರ ಕಬ್ಬಿನ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.
ಟನ್ ಕಬ್ಬಿಗೆ 2920 ರೂ.ಪಾವತಿಸಬೇಕು. ಆದರೆ 2820 ರೂ. ನೀಡುವ ಮೂಲಕ ಕಾರ್ಖಾನೆ ಆಡಳಿತ ಮಂಡಳಿಯು ರೈತರಿಗೆ ವಂಚಿಸುತ್ತಿದೆ. ಈ ಕೂಡಲೇ 100 ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು.
ಡಿಸ್ಟರಿ ಘಟಕಗಳಿರುವ ಕಾರ್ಖಾನೆಗಳು ತಮ್ಮ ವ್ಯಾಪ್ತಿಯ ರೈತರು ಪೂರೈಸುವ ಟನ್ ಕಬ್ಬಿಗೆ 150 ರೂ. ಪ್ರೋತ್ಸಾಹ ಧನ ನೀಡಬೇಕೆಂದು ಸರ್ಕಾರ ಸೂಚಿಸಿದ್ದರೂ ಆಡಳಿತ ಮಂಡಳಿ ಈ ಹಣವನ್ನು ನೀಡುತ್ತಿಲ್ಲ ಆರೋಪಿಸಿದರು.
ಕಾರ್ಖಾನೆ ಆಡಳಿತ ಮಂಡಳಿಯು ಕಬ್ಬು ಅರೆಯುವುದನ್ನು ಡಿಸೆಂಬರ್ ಗೆ ನಿಲ್ಲಿಸಬೇಕೆಂದು ತೀರ್ಮಾನಿಸಿರುವುದು ಖಂಡನೀಯ. ಜನವರಿ ಅಂತ್ಯದವರೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಸೊಳ್ಳೆಪುರ ಸೊ.ಸಿ. ಪ್ರಕಾಶ, ಪ್ರಭುಲಿಂಗ, ಕೆ.ಜಿ.ಉಮೇಶ್, ಅರಗಿನಮೇಳೆ ರಾಮೇಗೌಡ, ಮರಳಿಗ ಶಿವರಾಮು, ಶ್ರೀನಿವಾಸ, ಮೂಡ್ಯ ಚನ್ನೇಗೌಡ, ಪುಟ್ಟಸ್ವಾಮಿ, ರಾಮಣ್ಣ, ಶಂಕರ, ಎಂ.ಡಿ.ಶಿವಣ್ಣ, ಪಣ್ಣೆದೊಡ್ಡಿ ವೆಂಕಟೇಶ, ರಮೇಶ, ರಾಮಕೃಷ್ಣ, ನಾಗರಾಜು, ಚಿಕ್ಕಲಿಂಗಯ್ಯ, ರಾಜೇಶ, ಬೆಳತೂರು ಕಾಂತರಾಜು, ಚೋಟ್ಟನಹಳ್ಳಿ ಶ್ರೀನಿವಾಸ, ಸಿ.ಇ. ಉಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net