

ತುಮಕೂರು: ಮುಂದುವರಿದ ಜಾತಿಗಳಿಗೆ 1 ಸಾವಿರ ಕೋಟಿ ರೂ., ಅನುದಾನ ನೀಡಿ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳಿಗೆ ಕೇವಲ 500 ಕೋಟಿ ರೂ., ಅನುದಾನವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿರುವುದನ್ನು ವಿರೋಧಿಸಿ ಜೆಡಿಎಸ್ ಪರಿಶಿಷ್ಟ ತಾಲೂಕು ಘಟಕದಿಂದ ಗೂಳೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ತಾಲೂಕು ಅಧ್ಯಕ್ಷ ಬೆಳಗುಂಬ ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ದಲಿತ ವಿರೋಧಿ ಬಿಜೆಪಿ ಸರ್ಕಾರದ ಮಲತಾಯಿ ಧೋರಣೆ ವಿರೋಧಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಬೆಳಗುಂಬ ವೆಂಕಟೇಶ್, ದಲಿತರ ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಎಸ್ಟಿಪಿ, ಟಿಎಸ್ಪಿ ಹಣಕ್ಕೆ ಕತ್ತರಿ ಹಾಕಿರುವುದು ದುರದೃಷ್ಟಕರ. ಒಳ ಮೀಸಲಾತಿ ಸೇರಿ ದಲಿತರ ಅಭಿವೃದ್ಧಿಗೆ ಭರಪೂರ ಭರವಸೆಗಳನ್ನು ನೀಡಿದ್ದ ಬಿಜೆಪಿ ಈಗ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹರಿಹಾಯ್ದರು.
ಈ ಹಿಂದೆ ಇದ್ದ ಸಮ್ಮಿಶ್ರ ಸರ್ಕಾರ ಆಗಲಿ, ಕಾಂಗ್ರೆಸ್ ಸರ್ಕಾರವಾಗಲಿ ದಲಿತರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದವು. ಆದರೆ, ಬಿಜೆಪಿ ಸರ್ಕಾರ ರಾಜ್ಯದಲ್ಲಿರುವ ಬಹುಸಂಖ್ಯಾತ ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ ಕನಿಷ್ಠ ಅನುದಾನ ನೀಡುವ ಮೂಲಕ ಮಾಡಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜನರ ಕಲ್ಯಾಣಕ್ಕಾಗಿ ಮಂಡಿಸುವ ಬಜೆಟ್‌ನಲ್ಲಿ ಸಾಮಾಜಿಕ ನ್ಯಾಯ ಕಾಪಾಡಲು ಬಿಎಸ್‌ವೈ ವಿಫಲವಾಗಿದ್ದಾರೆ. ಅಹಿಂದ ವರ್ಗಗಳನ್ನು ಸಂಪೂರ್ಣ ಕಡೆಗಣಿಸಿರುವ ಯಡಿಯೂರಪ್ಪ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ವಿರೋಧವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಸಿಂಡಿಕೇಟ್ ಮಾಜಿ ಸದಸ್ಯ ಹೆತ್ತೇನಹಳ್ಳಿ ಮಂಜುನಾಥ್ ಆರೋಪಿಸಿದರು.
ಸಾಮಾಜಿಕ ನ್ಯಾಯಕ್ಕೆ ವಿರೋಧಿಯಾಗಿರುವ ಈ ಬಜೆಟ್‌ನಲ್ಲಿ ಕೆಲ ಸಮುದಾಯಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ಸ್ವಾಗಾತಾರ್ಹ ಆದರೆ ಅಹಿಂದ ವರ್ಗವನ್ನು ಕಡೆಗಣಿಸಿರುವುದು ಏಕೆ ಎಂದು ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ರಾಮಚಂದ್ರಪ್ಪ ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ನರುಗನಹಳ್ಳಿ ವಿಜಯಕುಮಾರ್, ಜಹೀರ್ ಅಬ್ಬಾಸ್, ಗೂಳೂರು ಗ್ರಾಪಂ ಅಧ್ಯಕ್ಷ ಕೃಷ್ಣೇಗೌಡ, ಕೆಂಪಹನುಮಣ್ಣ, ಕರೆ ರಂಗಪ್ಪ, ಚಲುವಣ್ಣ ಇದ್ದರು.
ಬಿಜೆಪಿಯ ಎಸ್ಸಿ, ಎಸ್ಟಿ ಶಾಸಕರು ಬಜೆಟ್‌ನಲ್ಲಿ ಎಸ್ಟಿಪಿ, ಟಿಎಸ್ಪಿ ಅನುದಾನ ಕಡಿತಗೊಳಿಸಿರುವುದಕ್ಕೆ ಮೌನವಹಿಸಿರುವುದು ಅವರ ಅಸಹಾಯಕತೆಗೆ ಸಾಕ್ಷಿ. ದಲಿತರ ಅಭಿವೃದ್ಧಿ ಅನುದಾನ ಕಡಿತಗೊಳಿಸಿದರು ತೆಪ್ಪಗಿರುವ ಪರಿಶಿಷ್ಟ ಶಾಸಕರು, ಸಚಿವರಾಗಿರುವರು ತಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸಲು ಆಗದೇ ಇದ್ದರೆ ರಾಜೀನಾಮೆ ಕೊಡಲಿ. ಬೆಳಗುಂಬ ವೆಂಕಟೇಶ್ ಅಧ್ಯಕ್ಷ, ತಾಲೂಕು ಜೆಡಿಎಸ್ ಎಸ್ಸಿ ಘಟಕ