ಹಾನಗಲ್ಲದಲ್ಲಿ ಕಚೇರಿ ತೆರೆದು ಮತದಾರರ ರಕ್ಷಣೆ

HNL BOMMAYI
Published on

ಹಾನಗಲ್ಲ: ಶಾಶ್ವತ ನೀರಾವರಿ ಮೂಲಕ ತಾಲೂಕನ್ನು ತೋಟಗಾರಿಕೆ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಕನಸು ನನ್ನದು. ತಾಲೂಕನ್ನು ಬಿಜೆಪಿಯ ಭದ್ರ ಕೋಟೆ ಮಾಡಲು ಮತ್ತೆ ಎಲ್ಲರೂ ಒಂದಾಗಿ ಸಹಕರಿಸಿ ಎಂದು ನೂತನ ಸಂಸದ ಬಸವರಾಜ ಬೊಮ್ಮಾಯಿ ಕೋರಿದರು.

ಪಟ್ಟಣದ ಸದಾಶಿವ ಮಂಗಲ ಭವನದಲ್ಲಿ ಬಿಜೆಪಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ಚುನಾವಣೆ ನಡೆದಿದೆ. ತಾಲೂಕಿನಲ್ಲಿ ಉದಾಸಿ ಅವರ ನಿಧನಾ ನಂತರದ ಬಿಜೆಪಿಯ ಮೊದಲ ಗೆಲುವು ಇದಾಗಿದೆ. ದಿ. ಸಿ.ಎಂ.ಉದಾಸಿ ಹಾಗೂ ಮಾಜಿ ಸಚಿವ ಮನೋಹರ ತಹಶೀಲ್ದಾರರು ತಾಲೂಕಿನಲ್ಲಿ ದ್ವೇಷರಹಿತ ರಾಜಕಾರಣ ಮಾಡಿದ್ದಾರೆ. ಇಬ್ಬರೂ ಅಭಿವೃದ್ಧಿಗೆ ಆದ್ಯತೆ ನೀಡಿದರೆ ಹೊರತು ಪೊಲೀಸ್ ಆಡಳಿತ ನೀಡಲಿಲ್ಲ. ಜನಸಾಮಾನ್ಯರ ಮೇಲಿನ ಅನ್ಯಾಯವನ್ನು ಈ ತಾಲೂಕು ಸಹಿಸುವುದಿಲ್ಲ. ನಾನು ಸಂಸದನಾಗಿ ಮಾತ್ರವಲ್ಲ ಹಾನಗಲ್ಲ ತಾಲೂಕಿನ ಮಟ್ಟಿಗೆ ಶಾಸಕನಾಗಿ ನಿರ್ವಹಿಸಬೇಕಾದ ಜವಬ್ದಾರಿಯನ್ನೂ ವಹಿಸಿಕೊಳ್ಳುತ್ತೇನೆ. ಇಲ್ಲಿಯೇ ಕಚೇರಿ ತೆರೆದು ಮತದಾರರ ರಕ್ಷಣೆಗಾಗಿ ಕೆಲಸ ಮಾಡುತ್ತೇನೆ. ಆಡಳಿತದಲ್ಲಿ ಸಂಪೂರ್ಣ ಬದಲಾವಣೆ ತರುತ್ತೇನೆ. ನನ್ನ ಹಾಗೂ ಈ ಕ್ಷೇತ್ರದ ಜನತೆಯ ನಡುವೆ ಮಧ್ಯಸ್ಥಿಕೆ ವಹಿಸುವವರು ಬೇಡ. ಬಿಜೆಪಿ ಕಾರ್ಯಕರ್ತರು ಕಳೆದುಕೊಂಡ ಆತ್ಮವಿಶ್ವಾಸವನ್ನು ಮರಳಿ ಪಡೆದಿದ್ದಾರೆ ಎಂದರು.

7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಸರ್ಕಾರದ ಬಳಿ ಹಣವಿಲ್ಲ, ಖಜಾನೆ ಖಾಲಿಯಾಗಿದೆ, ಹೀಗಾಗಿ ರಾಜ್ಯ ಸರ್ಕಾರ ಸರ್ಕಾರಿ ಆಸ್ತಿಗಳನ್ನು ಮಾರುತ್ತಿದೆ. ರಾಜ್ಯಕ್ಕೆ ಒಂದು ವರ್ಷದಲ್ಲಿ ಮತ್ತೆ ಚುನಾವಣೆ ಬರುತ್ತದೆ. ನಾವೇನೂ ಆಪರೇಷನ್ ಮಾಡುವುದಿಲ್ಲ, ಜನರೇ ಮಾಡುತ್ತಾರೆ ಕಾಯುತ್ತಿರಿ. ರಾಜ್ಯದಲ್ಲಿ ಸಮಾಜ ಘಾತುಕ ಘಟನೆಗಳು ರಾಜಾರೋಷವಾಗಿ ನಡೆಯುತ್ತಿವೆ. ಆಡಳಿತ ವ್ಯವಸ್ಥೆ ಕುಸಿದಿದೆ. ಲಂಚಾವತಾರ ಮಿತಿ ಮೀರಿದೆ ಎಂದು ಟೀಕಿಸಿದರು.

ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ತಾಲೂಕಿನಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್‌ನವರ ನಿದ್ದೆಗೆಡಿಸಿದೆ. ತಾಲೂಕಿನ ಆಡಳಿತ ಜಿಡ್ಡುಗಟ್ಟಿದೆ ಎಂದರು.

ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕ ಶಿವರಾಜ ಸಜ್ಜನ, ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ರಾಜು ಗೌಳಿ, ಎಸ್.ಎಂ. ಕೋತಂಬರಿ, ಶೋಭಾ ಉಗ್ರಣ್ಣನವರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಕಲ್ಯಾಣಕುಮಾರ ಶೆಟ್ಟರ ಮಾತನಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ, ಬಸವರಾಜ ಹಾದಿಮನಿ, ರಾಜಶೇಖರಗೌಡ ಕಟ್ಟೇಗೌಡರ, ಕೃಷ್ಣ ಈಳಿಗೇರ, ಮಾಲತೇಶ ಸೊಪ್ಪಿನ, ಶಿವಲಿಂಗಪ್ಪ ತಲ್ಲೂರ, ಬಿ.ಎಸ್.ಅಕ್ಕಿವಳ್ಳಿ, ಭೋಜರಾಜ ಕರೂದಿ, ಮಾಲತೇಶ ಗಂಟೇರ, ಪದ್ಮನಾಭ ಕುಂದಾಪೂರ, ಮಾರುತಿ ಪುರ್ಲಿ, ಶಿವಯೋಗಿ ಹಿರೇಮಠ, ಎ.ಎಸ್.ಬಳ್ಳಾರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net