

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಾಲಕಾರ್ಮಿಕ ಪದ್ಧತಿ ವಿರುದ್ಧ ಎಷ್ಟೇ ಜನಜಾಗೃತಿ ಮೂಡಿಸುತ್ತಿದ್ದರೂ, ಕಠಿಣ ಕಾನೂನು ರೂಪಿಸಿದ್ದರೂ ಜಿಲ್ಲೆಯಲ್ಲಿ ಬಾಲಕರನ್ನು ಕಾರ್ಮಿಕರನ್ನಾಗಿ ದುಡಿಮೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ನಿದರ್ಶನ ಎಂಬಂತೆ ದೊಡ್ಡಬಳ್ಳಾಪುರದಲ್ಲಿ ಗುರುವಾರ ಕಾರ್ಮಿಕರ ಇಲಾಖೆ ಕಾರ್ಯಾಚರಣೆಯಲ್ಲಿ ಇಬ್ಬರು ಬಾಲಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ ನೂರಾರು ಮಕ್ಕಳು ಪತ್ತೆಯಾಗುತ್ತಲೇ ಇದ್ದಾರೆ. ಮೊದಲೆಲ್ಲ ಬಡತನ, ಕುಟುಂಬದ ಹಿನ್ನೆಲೆ ಮತ್ತಿತರ ಕಾರಣಕ್ಕೆ ಸ್ಥಳೀಯ ಬಾಲಕರನ್ನು ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಇತ್ತೀಚೆಗೆ ಹೊರ ರಾಜ್ಯದಿಂದ ಮಕ್ಕಳನ್ನು ಕರೆತಂದು ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
ರಾಜಸ್ಥಾನದಿಂದ ಕರೆತಂದಿದ್ದರು: ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಜಂಟಿಯಾಗಿ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಜ್ಯುವೆಲ್ಲರಿ ಅಂಗಡಿ ಹಾಗೂ ದ್ವಿಚಕ್ರ ವಾಹನ ಗ್ಯಾರೇಜ್‌ನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಇಬ್ಬರು ಬಾಲಕರನ್ನು ರಕ್ಷಣೆ ಮಾಡಲಾಗಿದೆ. ಇದರಲ್ಲಿ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ರಾಜಸ್ಥಾನ ಮೂಲದವನಾಗಿದ್ದು, ಅಲ್ಲಿಂದಲೇ ಕರೆತರಲಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸಂಬಂಧಿಗಳ ಹೆಸರಿನಲ್ಲಿ ಜ್ಯುವೆಲ್ಲರಿ ಶಾಪ್‌ನಲ್ಲಿ ಕೆಲಸಕ್ಕಿಟ್ಟುಕೊಳ್ಳಲಾಗಿತ್ತು. ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಅಂಗಡಿ ಮಾಲೀಕರು ಬಾಲಕನಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಅದೇ ರೀತಿ ಗ್ಯಾರೆಜ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕನೂ ಹೊರರಾಜ್ಯದವನು ಎಂದು ಗುರುತಿಸಲಾಗಿದೆ.
ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ದಾಖಲು ರಕ್ಷಣೆ ಮಾಡಿದ ಬಾಲ ಕಾರ್ಮಿಕರನ್ನು ದೊಡ್ಡಬಳ್ಳಾಪುರ ಹಾಗೂ ವಿಜಯಪುರದಲ್ಲಿನ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ನಂತರದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುತ್ತದೆ. ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕರಾದರೆ ದೊಡ್ಡಬಳ್ಳಾಪುರ ಬಾಲಕಿಯರಾದರೆ ವಿಜಯಪುರದಲ್ಲಿನ ಎನ್‌ಜಿಒಗಳು ನಡೆಸುತ್ತಿರುವ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಸೋಮವಾರ ಹಾಗೂ ಶುಕ್ರವಾರ ಕಾರ್ಯನಿರ್ವಹಿಸುವ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಹಾಯವಾಣಿ ಮಕ್ಕಳ ಸಹಾಯವಾಣಿ 1098ಗೆ ಕರೆ ಬಂದ ಹಿನ್ನೆಲೆಯಲ್ಲಿ ವಿವಿಧ ಇಲಾಖೆ ಸಹಯೋಗದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ವೇಳೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ನೇರವಾಗಿ ಸಿಕ್ಕಿಬಿದ್ದಿದ್ದಾರೆ. ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದಲ್ಲಿ ಜಾಗೃತಿ ಮೆಳೆಕೋಟೆ ಗ್ರಾಮದಲ್ಲಿ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಸ್ಟಿಕರ್ ಅಂಟಿಸಿ ಮತ್ತು ಕರಪತ್ರ ವಿತರಿಸಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಅಧಿಕಾರಿಗಳು ಜಾಗೃತಿ ಮೂಡಿಸಿದರು.
ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದಾಗಿ ಬಂದ ದೂರಿನ ಮೇರೆಗೆ ತಪಾಸಣೆ ಕೈಗೊಂಡು ಇಬ್ಬರು ಬಾಲಕರನ್ನು ದೊಡ್ಡಬಳ್ಳಾಪುರ ತಾಲೂಕಿನ ಮೆಳೆಕೋಟೆ ಗ್ರಾಮದಲ್ಲಿ ರಕ್ಷಿಸಲಾಗಿದೆ. ಪ್ರಸ್ತುತ ಮಕ್ಕಳನ್ನು ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ. ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ ನೋಟಿಸ್ ವಿತರಿಸಲಾಗಿದೆ.
ಎಚ್.ಆರ್.ನಾಗೇಂದ್ರ
ಜಿಲ್ಲಾ ಕಾರ್ಮಿಕ ಅಧಿಕಾರಿ
ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಯಿತು. ಮಕ್ಕಳ ಸಹಾಯವಾಣಿ ಆಧಾರದ ಮೇಲೆ ದಾಳಿ ನಡೆಸಿದ್ದು, ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದು, ಶುಕ್ರವಾರ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗುವುದು.
ಎಸ್.ಸುಬ್ಬಾರಾವ್
ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ