

ರಬಕವಿ-ಬನಹಟ್ಟಿ: ಸರ್ಕಾರ ಭ್ರೂಣಹತ್ಯೆ ನಿಷೇಧಿಸಿದೆ. ಲಿಂಗ ಸಮಾನತೆ ಸಾಧಿಸುವುದು ಅವಶ್ಯಕವಾಗಿದೆ. ಹೆಣ್ಣು ಮಕ್ಕಳನ್ನು ರಕ್ಷಿಸುವುದು, ಓದಿಸುವುದು ಇಂದಿನ ಅಗತ್ಯವಾಗಿದೆ. ಈ ಕುರಿತು ಜಾಗೃತಿ ಮನೆಯಿಂದಲೇ ಆರಂಭವಾಗಬೇಕು ಎಂದು ಬನಹಟ್ಟಿ ಹಿರಿಯ ದಿವಾಣಿ ನ್ಯಾಯಾಧೀಶ ಆಶಪ್ಪ ಸಣಮನಿ ಅಭಿಪ್ರಾಯಪಟ್ಟರು.
ಸಮೀಪದ ಹೊಸೂರಿನ ಸ್ತ್ರೀಶಕ್ತಿ ಭವನದಲ್ಲಿ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಕಾನೂನು ಜಾಗೃತಿ ಅತ್ಯಂತ ಅವಶ್ಯಕವಾಗಿದೆ. ಜೀವನ ಸುಖವಾಗಿ ನಡೆಯಬೇಕಾದರೆ ಕಾನೂನು ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ದಿವಾಣಿ ನ್ಯಾಯಾಧೀಶೆ ಸುಷ್ಮಾ ಟಿ. ಸಿ. ಮಾತನಾಡಿ, ಹೆಣ್ಣು ಮಗು ಎಂದು ತಾತ್ಸಾರ ಬೇಡ. ಹೆಣ್ಣು ಹುಟ್ಟಿತು ಎಂದು ಕೀಳರಿಮೆ ಪಡದೆ ಉತ್ತಮ ಆಹಾರ, ಶಿಕ್ಷಣ ನೀಡಿ ಹೆಣ್ಣು ಮಕ್ಕಳನ್ನು ಬೆಳೆಸಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಶ್ರೀಶೈಲ ಬುರ್ಲಿ, ನಮ್ಮ ಸಂವಿಧಾನ ಲಿಂಗ ಸಮಾನತೆಯನ್ನು ಎತ್ತಿ ಹಿಡಿದಿದೆ. ಹೆಣ್ಣು ಮಕ್ಕಳು ಇಂದು ಎಲ್ಲ ರಂಗಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಹೆಣ್ಣು ಮಗುವನ್ನು ರಕ್ಷಿಸೋಣ ಎಂದರು.
ಎಂ. ಕೆ. ಮುಲ್ಲಾ ಪೌಷ್ಟಿಕ ಆಹಾರದ ಕುರಿತು, ಚಿನ್ನಪ್ಪ ಕರಲಟ್ಟಿ ಹೆಣ್ಣು ಮಕ್ಕಳ ಸಾಕ್ಷರತೆ ಕುರಿತು ಉಪನ್ಯಾಸ ನೀಡಿದರು. ಬಾಣಂತಿಯರಿಗೆ ಸೀಮಂತ ಹಾಗೂ ಚಿಕ್ಕ ಮಕ್ಕಳಿಗೆ ಅನ್ನ ಪ್ರಶಾನ ಕಾರ್ಯಕ್ರಮ ನಡೆಯಿತು.
ಶಿಶು ಅಭಿವದ್ಧಿ ಯೋಜನಾಧಿಕಾರಿ ಎಸ್.ಸಿ. ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಸಲಬನ್ನವರ, ಅಕ್ಷತಾ ಜಗಜಿನ್ನಿ, ಶಂಕ್ರಮ್ಮ ಚೆನ್ನಿ, ನಾಗವೇಣಿ ಮಾಳಿ, ಮುತ್ತವ್ವ ಹಿಪ್ಪರಗಿ, ಲಕ್ಷ್ಮಿ ಜಿಗಜಿನ್ನಿ, ರಾಜೇಶ್ವರಿ ತಿಮ್ಮಾಪುರ, ಕಮಲಾ ಕುರಣಿ ಭಾಗವಹಿಸಿದ್ದರು.
ವಿ. ಟಿ. ನಿಂಗಸಾನಿ ನಿರೂಪಿಸಿದರು. ಎಸ್. ವಿ. ಮಹಾಜನ ಸ್ವಾಗತಿಸಿದರು. ಸುನಂದಾ ಕಾಲತಿಪ್ಪಿ ವಂದಿಸಿದರು.