ಸಂವಿಧಾನದ ರಕ್ಷಣೆ ಅಗತ್ಯ : ಡಿಎಸ್‌ಎಸ್‌ನ ರಾಜ್ಯ ಸಂಚಾಲಕ ಡಾ.ಡಿ.ಜಿ. ಸಾಗರ

7BG-SAGAR
ವಿಜಯಪುರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ಡಿ.ಜಿ.ಸಾಗರ ಮಾತನಾಡಿದರು. ಮುಖಂಡ ವೈ.ಸಿ.ಮಯೂರ ಇದ್ದರು.
Published on

ವಿಜಯಪುರ : ದೇಶದಲ್ಲಿ ಸಂವಿಧಾನದ ರಕ್ಷಣೆ ಮಾಡುವ ಅಗತ್ಯ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಾ.ಡಿ.ಜಿ. ಸಾಗರ ಹೇಳಿದರು.

ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವ ಕೇಂದ್ರ ಸರ್ಕಾರ ಪರಿಶಿಷ್ಟರನ್ನು ಹಾಗೂ ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವಲ್ಲಿ ಸೋತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದಲ್ಲಿ ೬೩ ಲಕ್ಷ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ವಂಚಿಸಲಾಗಿದೆ. ಸರ್ಕಾರದ ಇಲಾಖೆಗಳನ್ನು ಖಾಸಗೀಕರಣ ಮಾಡಿ ಮೀಸಲಾತಿಯನ್ನು ತಗೆಯುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

ಪ್ರತಿವರ್ಷವೂ ಎರಡು ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಅಽಕಾರಕ್ಕೆ ಬಂದಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಂಟು ವರ್ಷದಲ್ಲಿ ೧೬ ಕೋಟಿ ಉದ್ಯೋಗ ಸೃಷ್ಠಿಸಬೇಕಿತ್ತು. ಆದರೆ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಈ ಮೂಲಕ ಯುವ ಜನರನ್ನು ಬೀದಿಗೆ ತಳ್ಳುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪರಿಶಿಷ್ಟರಿಗಾಗಿ ಶೇ.೨೪ ರಷ್ಟು ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು. ಕಳೆದ ಬಜೆಟ್‌ನಲ್ಲಿ ೪೩ ಸಾವಿರ ಕೋಟಿ ರೂ. ಮೀಸಲಿಡಬೇಕಿತ್ತು. ಆದರೆ ೨೮ ಸಾವಿರ ಕೋಟಿ ರೂ. ಮಾತ್ರ ನೀಡಲಾಗಿದೆ. ಈ ಮೂಲಕ ಪರಿಶಿಷ್ಟರನ್ನು ಅನ್ಯಾಯ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇ. ೧೦ ರಷ್ಟು ಮೀಸಲಾತಿಯನ್ನು ಕಲ್ಪಿಸಿರುವುದು ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಂತಾಗಿದೆ. ಕೆಲ ಮೇಲ್ವರ್ಗದವರು ಪರಿಶಿಷ್ಟ ಜಾತಿಗೆ ನೀಡಿರುವ ಮೀಸಲಾತಿಯಂತೆ ನೀಡಲು ಸರ್ಕಾರಕ್ಕೆ ಒತ್ತಾಯ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದರು.

ಇನ್ನೂ ರಾಜ್ಯದಲ್ಲಿ ಅನೇಕ ಹಿಂದು ಹಾಗೂ ಅಲ್ಪಸಂಖ್ಯಾತರ ಹತ್ಯೆ ಪ್ರಕರಣಗಳು ನಡೆದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಭ್ರಷ್ಟಾಚಾರ ಶೇ.೪೦ ರಷ್ಟು ಅಲ್ಲ, ಮನಸ್ಸಿಗೆ ಬಂದಂತೆ ಬಾಚಿಕೊಳ್ಳುವ ಕೆಲಸದಲ್ಲಿ ಸರ್ಕಾರ ತೊಡಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

೯ರಂದು ಬ.ಬಾಗೇವಾಡಿಯಲ್ಲಿ ಸಮಾವೇಶ
ಸಂವಿಧಾನದ ರಕ್ಷಣೆಗೆ ಒತ್ತಾಯಿಸಿ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಬಸವ ಭವನದಲ್ಲಿ ಆ.೧೯ರಂದು ಬೆಳಗ್ಗೆ ೧೧.೩೦ಕ್ಕೆ ಜಿಲ್ಲಾಮಟ್ಟದ ಚಿಂತನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಮುಂಡರಗಿಯ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಪ್ರಭು ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಶಿವಾನಂದ ಪಾಟೀಲ, ರಮೇಶ ಆಸಂಗಿ, ಮಲ್ಲಿಕಾ ಘಂಟಿ, ಹಾಸಿಂಪೀರ ವಾಲಿಕಾರ, ಡಾ.ಪ್ರಭುಗೌಡ ಪಾಟೀಲ, ಅಶೋಕ ಮನಗೂಳಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ವಿನಾಯಕ ಗುಣಸಾಗರ, ವೈ.ಸಿ.ಮಯೂರ, ನಗರ ಸಮಿತಿ ಸಂಚಾಲಕ ಸಿದ್ದು ರಾಯಣ್ಣವರ, ಜಿಲ್ಲಾ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಅಶೋಕ ಚಲವಾದಿ, ಶರಣು ಸಿಂಧೆ, ರಮೇಶ ಧರಣಾಕರ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net