ಸಂವಿಧಾನದ ರಕ್ಷಣೆ ಪ್ರತಿಯೊಬ್ಬರ ಹೊಣೆ

8 kdr 2
Published on

ಕಡೂರು: ಸಮಾನತೆ ಆಧಾರದಲ್ಲಿ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸದಿದ್ದರೆ ತುಳಿತಕ್ಕೊಳಗಾದವರ ಪರಿಸ್ಥಿತಿ ಊಹಿಸಲೂ ಅಸಾಧ್ಯವಾಗುತ್ತಿತ್ತು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಭಾರತ ದೇಶದ ಸಮಗ್ರತೆ ಮತ್ತು ಏಕತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ವರ್ಗದವರಿಗೂ ಸಮಾನ ನ್ಯಾಯ ಸಿಗುವಂತೆ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ದೇಶವಾಸಿಗಳ ನೆಮ್ಮದಿಗೆ ಕಾರಣವಾಗಿದೆ. ಅಂತಹ ಪವಿತ್ರ ಸಂವಿಧಾನವನ್ನು ಅಪಮಾನಗೊಳಿಸುವ ವಿದ್ಯಮಾನಗಳು ಇತ್ತೀಚೆಗೆ ನಡೆಯುತ್ತಿರುವುದು ವಿಪರ್ಯಾಸ. ಅಂಬೇಡ್ಕರ್ ರಹಿತ ಭಾರತವನ್ನು ಕಲ್ಪನೆ ಮಾಡಿಕೊಳ್ಳಲೂ ಅಸಾಧ್ಯ. ಅವರು ರಚಿಸಿದ ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಅಂಬೇಡ್ಕರ್ ಅವರನ್ನು ದೇಶವಾಸಿಗಳು ಸದಾ ಸ್ಮರಿಸಬೇಕು. ದೇಶಕ್ಕೆ ಅಗತ್ಯ ಸಂವಿಧಾನ ರೂಪಿಸಿ ಜನಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.

ತಹಸೀಲ್ದಾರ್ ಪೂರ್ಣಿಮಾ, ಇಒ ಪ್ರವೀಣ್, ಸಮಾಜ ಕಲ್ಯಾಣಾಧಿಕಾರಿ ನಟರಾಜ್, ಡಿಎಸ್‌ಎಸ್ ಮೈಸೂರು ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಜಿಲ್ಲಾ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಅಂಬೇಡ್ಕರ್ ನಗರ ಶಂಕರ್, ಲಕ್ಷ್ಮಣ್,ಪ್ರಮೋದ್, ರಾಮಸ್ವಾಮಿ, ಬಳ್ಳೇಕೆರೆ ಸಂತೋಷ್, ದಲಿತ ಸಂಘಟನೆಗಳ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net