

ಹೊಳೆನರಸೀಪುರ: ಇಟ್ಟಿಗೆ ಕಾರ್ಖಾನೆಯಲ್ಲಿ ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದ ಅಂತಾರಾಜ್ಯದ ಒಂದೇ ಕುಟುಂಬದ ನಾಲ್ವರನ್ನು ಮಂಗಳವಾರ ರಕ್ಷಣೆ ಮಾಡಲಾಗಿದೆ.
ಒಡಿಶಾ ಮೂಲದ ಮೋಕರ್ ದಚ ಪುಟೇಲ್, ಪತ್ನಿ ಊರ್ಮಿಳಾ ಪುಟೇಲ್, ಮಕ್ಕಳಾದ ವರ್ಷಿತಾ ಪುಟೇಲ್ ಹಾಗೂ ರಾಜ್‌ಪುಟೇಲ್ ಅವರನ್ನು ರಕ್ಷಣೆ ಮಾಡಲಾಗಿದೆ.
ತಾಲೂಕಿನ ಜೋಡಿಗುಬ್ಬಿ ಗ್ರಾಮದಲ್ಲಿರುವ ಎಸ್.ಎಂ.ಇಟ್ಟಿಗೆ ಕಾರ್ಖಾನೆಯಲ್ಲಿ ಜೀತ ಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ಟ್ವಿಟರ್ ಸಂದೇಶ ಬಂದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಧಾವಿಸಿ ತನಿಖೆ ಮಾಡಿ ಕ್ರಮ ಜರುಗಿಸುವಂತೆ ಮೇಲಧಿಕಾರಿಗಳಿಂದ ಸೂಚನೆ ಬಂದ ಕಾರಣ ತಹಸೀಲ್ದಾರ್ ಕೃಷ್ಣಮೂರ್ತಿ, ಹಳ್ಳಿಮೈಸೂರು ಪೊಲೀಸರು ಜೋಡಿಗುಬ್ಬಿ ಗ್ರಾಮದ ಜಮೀನಿನಲ್ಲಿ ಸತೀಶ್ ನಡೆಸುತ್ತಿದ್ದ ಎಸ್.ಎಂ.ಇಟ್ಟಿಗೆ ಕಾರ್ಖಾನೆಗೆ ದಾಳಿ ಮಾಡಿದರು.
ಕೆಲಸ ಮಾಡುತ್ತಿದ್ದ ಮೋಕರ್ ದಚ ಪುಟೇಲ್, ಉರ್ಮಿಳಾ ಪುಟೇಲ್, ವರ್ಷಿತಾ ಪುಟೇಲ್ ಹಾಗೂ ರಾಜ್‌ಪುಟೇಲ್ ಅವರನ್ನು 3 ವರ್ಷಗಳಿಂದ ಕೆಲಸಕ್ಕೆ ಇರಿಸಿಕೊಂಡಿದ್ದು ಗೊತ್ತಾಗಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ದುಡಿಸಿಕೊಳ್ಳಲಾಗುತ್ತಿತ್ತು. 17 ಸಾವಿರ ರೂ. ನೀಡಿ ದಿನಕ್ಕೆ 1000 ಇಟ್ಟಿಗೆ ಮಾಡಿದರೆ 800 ರೂ. ನೀಡುವುದಾಗಿ ಕರೆದುಕೊಂಡು ಬಂದು ದುಡಿಸಿಕೊಳ್ಳಲಾಗುತ್ತಿತ್ತು. ಆದರೆ ಆಗಿನಿಂದಲೂ ಇಟ್ಟಿಗೆ ತಯಾರಿಸಿದ ಹಣವನ್ನೂ ನೀಡದೆ, ವಾರದಲ್ಲಿ ಒಂದು ದಿನವೂ ವಿಶ್ರಾಂತಿ ಇಲ್ಲದೆ ವಾರದ 7 ದಿನವೂ ಕೆಲಸ ಮಾಡಿಸಿಕೊಳ್ಳುತ್ತಿದ್ದ ವಿಚಾರ ಬಹಿರಂಗವಾಗಿದೆ.
ಅಲ್ಲದೆ, ಹೊರಗಡೆ ಮುಕ್ತವಾಗಿ ತಿರುಗಾಡಲು ಅವಕಾಶ ಕೊಡದೆ, ಸ್ವಂತ ಗ್ರಾಮಕ್ಕೆ ತೆರಳಲು 3 ವರ್ಷದಿಂದ ಒಮ್ಮೆಯೂ ಅವಕಾಶ ನೀಡದೆ ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದರು. ಊಟ, ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಜತೆಗೆ ತಮ್ಮ ಜಮೀನಿನ ಕೆಲಸಗಳನ್ನೂ ಮಾಡಿಸಿಕೊಳ್ಳುತ್ತಿದ್ದರು. ಊಟಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಡಿಸುತ್ತಿದ್ದನ್ನು ಬಿಟ್ಟರೆ ಹಣ ನೀಡಿಲ್ಲ ಎಂದು ನಾಲ್ವರು ದೂರಿದರು.
ಈ ಸಂಬಂಧ ಎಸ್.ಎಂ.ಇಟ್ಟಿಗೆ ಕಾರ್ಖಾನೆ ಮಾಲೀಕ ಸತೀಶ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು ಆಧರಿಸಿ ಹಳ್ಳಿಮೈಸೂರು ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಕ್ಷಣೆ ಮಾಡಿದ ಕಾರ್ಮಿಕ ಕುಟುಂಬಕ್ಕೆ ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ನೀಡಲಾಗಿದೆ.