ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷಣೆ : ಕೇರಳದ ಸಚಿವರಿಗೆ ಕನ್ನಡಗರಿಂದ ಮನವಿ

Published on

ಕಾಸರಗೋಡು: ಇತ್ತೀಚೆಗೆ ತಿರುವನಂತಪುರಂನಲ್ಲಿ ನಡೆದ ಅನಂತಪುರಿ ಕನ್ನಡ ಉತ್ಸವ-ರಾಜ್ಯೋತ್ಸವದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇರಳ ಆಹಾರ, ನಾಗರಿಕ ಸರಬರಾಜು ಸಚಿವ ಜಿ.ಆರ್.ಅನಿಲ್ ಅವರಿಗೆ ಕನ್ನಡ ಉತ್ಸವ ಆಯೋಜಕರಾದ ಕರ್ನಾಟಕ ಸರ್ಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಮತ್ತಿತರ ಸಂಘ ಸಂಸ್ಥೆಗಳ ಪರವಾಗಿ ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷಣೆಗಾಗಿ ಮನವಿ ಸಲ್ಲಿಸಲಾಯಿತು.

ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಡಾ. ಪ್ರಭಾಕರನ್ ಆಯೋಗದ ವರದಿ 2013ರ ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರ ಕುರಿತು ಅಧ್ಯಾಯ16ರಲ್ಲಿ ಹೇಳಿರುವಂತೆ ರಾಜ್ಯದ ಭಾಷಾ ಅಲ್ಪಸಂಖ್ಯಾತರ ಪರವಾಗಿರುವ ಎಲ್ಲ ಸರ್ಕಾರಿ ಆದೇಶಗಳನ್ನು ಅನುಷ್ಠಾನಗೊಳಿಸಬೇಕು, ಭಾಷಾ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಸೂಚನೆಗಳನ್ನು ಕನ್ನಡ ಭಾಷೆಯಲ್ಲೂ ಅನುಷ್ಠಾನಗೊಳಿಸಲು ಅಗತ್ಯ ನಿರ್ದೇಶನಗಳನ್ನು ನೀಡಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾ ಭಾಷಾ ಅಲ್ಪಸಂಖ್ಯಾತರ ಅಧ್ಯಕ್ಷರೆಂಬ ನೆಲೆಯಲ್ಲಿ ಪ್ರತಿ 4 ತಿಂಗಳಿಗೊಮ್ಮೆ ಸಭೆಗಳನ್ನು ಕರೆಯಬೇಕು ಎಂಬಿತ್ಯಾದಿ ಬೇಡಿಕೆಗಳು ಈ ಮನವಿಯಲ್ಲಿವೆ.

ವಿದ್ಯಾರ್ಥಿಗಳಿಗೆ, ಶಾಲೆಗಳಿಗೆ, ನಾಗರಿಕರಿಗೆ ಸರ್ಕಾರ ಒದಗಿಸಿದ ಕಿರುಪುಸ್ತಕಗಳು, ಕರಪತ್ರಗಳು ಇತ್ಯಾದಿಗಳು ಕನ್ನಡದಲ್ಲಿ ಲಭ್ಯವಾಗುತ್ತಿಲ್ಲ. ಕನ್ನಡಿಗರಿಗೆ ಸುತ್ತೋಲೆಗಳು ಕನ್ನಡದಲ್ಲಿ ಪೂರೈಕೆಯಾಗುತ್ತಿಲ್ಲ. ಇಂತಹ ತಾರಮ್ಯದ ಅದೆಷ್ಟೋ ಉದಾಹರಣೆಗಳಿದ್ದು, ರಾಜ್ಯದ ಭಾಷಾ ಅಲ್ಪಸಂಖ್ಯಾತರ ಕುಂದು-ಕೊರತೆಗಳನ್ನು ನಿವಾರಿಸಲು ಯಾರೂ ಮುಂದೆ ಬರುವುದಿಲ್ಲ. ಇದು ನಿಜಕ್ಕೂ ಶೋಚನೀಯ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದೆಂದು ಸಚಿವರು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net