ದಾಖಲೆಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ

9 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಐತಿಹಾಸಿಕ ದಾಖಲೆಗಳ ಸಂಗ್ರಹ ಮತ್ತು ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಆ ದಾಖಲೆಗಳಿಂದ ಲಭ್ಯವಾಗುವ ಐತಿಹಾಸಿಕ, ಮಹತ್ವಪೂರ್ಣ ಘಟನೆಗಳ ಮಾಹಿತಿಯನ್ನು ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಪ್ರಾದೇಶಿಕ ಪತ್ರಗಾರ ಇಲಾಖೆ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಒಂದು ದಿನದ ಪತ್ರಗಾರ ಕೂಟ ಮತ್ತು ಉಪನ್ಯಾಸ ಮಾಲೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಾಖಲೆಗಳು ಅತ್ಯಮೂಲ್ಯ ಮಾಹಿತಿ ನೀಡುವ ಮೂಲಕ ಒಂದು ವಿಷಯದ ಪರಿಪೂರ್ಣ ಚರಿತ್ರೆ ಕಟ್ಟುವಲ್ಲಿ ಮತ್ತು ಅಧ್ಯಯನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಇಂದಿನ ವಿದ್ಯಾರ್ಥಿಗಳು ತಾಳೆಗರಿ, ದಾಖಲೆ ಪತ್ರ ರಕ್ಷಿಸುವುದರ ಜತೆಗೆ ಅವುಗಳ ಅಧ್ಯಯನ ನಡೆಸಬೇಕು ಎಂದರು.
ಪ್ರಾದೇಶಿಕ ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಮಾತನಾಡಿ, ದಾಖಲೆಗಳ ರಕ್ಷಣೆ, ಅವುಗಳ ಮಹತ್ವ, ರಕ್ಷಣಾ ವಿಧಾನ, ಸ್ಥಳೀಯ ಇತಿಹಾಸ ಕಲೆ ಹಾಕಬೇಕು. ಮೌಖಿಕ ಇತಿಹಾಸ ಕಡೆಗೂ ನಾವಿಂದು ಹೆಜ್ಜೆ ಹಾಕಬೇಕಾಗಿದೆ. ನಾವಾಡುವ ಒಂದೊಂದು ಪದವೂ ಒಂದೊಂದು ಇತಿಹಾಸ ಹೇಳುತ್ತದೆ. ಹೀಗಾಗಿ ಇಂದಿನ ಪೀಳಿಗೆ ಐತಿಹಾಸಿಕ ದಾಖಲೆಗಳ ಸಂರಕ್ಷಣೆಗೆ ಮುಂದಾಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಇತಿಹಾಸದ ಪರಿಪೂರ್ಣ ಮಾಹಿತಿ ಲಭ್ಯವಾಗುವುದು ಎಂದರು.
ಇತಿಹಾಸ ತಜ್ಞ ಡಾ.ಸಿ.ಎಸ್. ಹಸಬಿ ಹಾಗೂ ಕರ್ನಾಟಕ ಕಾಲೇಜಿನ ಪ್ರಾಧ್ಯಾಪಕ ಡಾ. ಜಗದೀಶ ಕಿವುಡನ್ನವರ ಉಪನ್ಯಾಸ ನೀಡಿದರು. ಜನತಾ ಶಿಕ್ಷಣ ಸಮಿತಿಯಲ್ಲಿ ಸುದೀರ್ಘ 50 ವರ್ಷಗಳ ಸೇವ ಸಲ್ಲಿಸಿದ ಡಾ. ಅಜಿತ ಪ್ರಸಾದ ಅವರಿಗೆ ಧಾರವಾಡ ಪತ್ರಗಾರ ಇಲಾಖೆಯಿಂದ ಸನ್ಮಾನಿಸಲಾಯಿತು.
ಡಾ. ಶಿವಾನಂದ ಟವಳಿ, ಪ್ರೊ. ಬಿ.ಜಿ. ಕುಂಬಾರ, ಮಹಾವೀರ ಉಪಾಧ್ಯೆ, ಮಹಾಂತೇಶ ರವಾಟಿ, ವೈಶಾಲಿ ಕುಂದಗೋಳ, ಇತರರು ಇದ್ದರು. ಡಾ. ಆರ್.ವಿ. ಚಿಟಗುಪ್ಪಿ ಸ್ವಾಗತಿಸಿದರು, ಪ್ರೊ. ಮಹಾಂತ ದೇಸಾಯಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net