

ಬೆಳಗಾವಿ: ಉದ್ಯಮಭಾಗ ಪೊಲೀಸ್ ಠಾಣೆಯ ಸಿಪಿಐ ಧರೇಗೌಡ ಪಾಟೀಲ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಐದು ಪುಟಗಳ ಕೈ ಬರಹದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿದ್ದ ಪೊಲೀಸ್ ಪೇದೆಯನ್ನು ಪೊಲೀಸರೇ ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಉದ್ಯಮಭಾಗ ಠಾಣೆಯ ವಿಠ್ಠಲ ಮುನ್ನಾಳ ಆತ್ಮಹತ್ಯೆಗೆ ಯತ್ನಿಸಿದ ಕಾನಸ್ಟೇಬಲ್. ರಜೆ ಹಂಚಿಕೆ ವಿಚಾರದಲ್ಲಿ ಸಿಪಿಐ ತಾರತಮ್ಯ ಮಾಡುತ್ತಿದ್ದಾರೆ. ಕರ್ತವ್ಯದಲ್ಲಿದ್ದರೂ ಗೈರು ಹಾಜರಿ ತೋರಿಸುತ್ತಾರೆ. ವಿಪರೀತ ಜಾತಿಯತೆ ಮಾಡುವುದು, ಮಹಿಳಾ ಸಿಬ್ಬಂದಿ ನಿಂದನೆ ಜತೆಗೆ ಸರ್ವಾಧಿಕಾರಿ ಧೋರಣೆ ತೋರುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ತವ್ಯ ಸರದಿ ಪುಸ್ತಕದ ಪ್ರತಿ, ವಿವಿಧ ಆದೇಶ ಪ್ರತಿಗಳ ಸಮೇತ ಪತ್ರವನ್ನು ಹಿರಿಯ ಡಿಜಿ, ಐಜಿಪಿ, ಬೆಳಗಾವಿ ನಗರ ಪೊಲೀಸ್ ಆಯುಕ್ತ, ಖಡೇಬಜಾರ್ ಎಸಿಪಿ, ಗೃಹಮಂತ್ರಿ ಡಾ.ಜಿ. ಪರಮೇಶ್ವರ ಕಚೇರಿ, ಮಾನವ ಹಕ್ಕುಗಳ ಆಯೋಗ, ಪೊಲೀಸ್ ದೂರುಗಳ ಪ್ರಾಧಿಕಾರ, ಎಸ್‌ಸಿಎಸ್‌ಟಿ ಪ್ರಾಧಿಕಾರಕ್ಕೆ ರವಾನೆ ಮಾಡಿದ್ದಾರೆ. ಪತ್ರದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮನೆಗೆ ತೆರಳಿದ ಪೊಲೀಸ್ ಅಧಿಕಾರಿಗಳು ವಿಠ್ಠಲ ಮುನ್ನಾಳ ಅವರ ರಕ್ಷಣೆ ಮಾಡಿದ್ದಾರೆ. ವಿಠ್ಠಲ ಗುರುವಾರ ಕರ್ತವ್ಯಕ್ಕೂ ಹಾಜರಾಗಿದ್ದಾರೆ ಎಂದು ಉದ್ಯಮಬಾಗ ಠಾಣೆ ಪೊಲೀಸರು ತಿಳಿಸಿದ್ದಾರೆ.