

ಮಂಗಳೂರು: ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರವು ಅಂತರಾಷ್ಟ್ರೀಯ ಮಟ್ಟದ ಕ್ರಮಗಳನ್ನು ಕೈಗೊಳ್ಳಬೇಕು. ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಲ್ಪಸಂಖ್ಯಾತರ ರಕ್ಷಣೆಯು ಬಹುಸಂಖ್ಯಾತ ಜನರ ಕರ್ತವ್ಯವೆಂದು ಭಾವಿಸಬೇಕು. ಸಕಲ ಮಾನವ ಸಂಕುಲ ಶಾಂತಿ ಮತ್ತು ಸೌಹಾರ್ಧತೆ ಯಿಂದ ಬಾಳಲಿ ಎಂಬುದು ಸ್ವತಂತ್ರ ಭಾರತದ ಸಂಕಲ್ಪ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನೆಹರೂ ಮೈದಾನದಲ್ಲಿ ಗುರುವಾರ ನಡೆದ ದ.ಕ.ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
ರಾಜ್ಯದಲ್ಲಿ ನಗರಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಮಂಗಳೂರು ನಗರದ ಸಮೀಪದಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. 2024 ನೇ ಸಾಲಿನ ಮುಂಗಾರು ಅವಧಿಯನ್ನು ಜಿಲ್ಲಾಡಳಿತ ವತಿಯಿಂದ ಸಮರ್ಪಕವಾಗಿ ನಿರ್ವಹಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಇದೂವರೆಗೂ ವಾಡಿಕೆಗಿಂತ ಶೇ.14 ಹೆಚ್ಚು ಮಳೆಯಾಗಿದೆ. ಮಳೆಯಿಂದಾಗಿ ಜೂ.2024ರಿಂದ ಇದೂವರೆಗೂ ಒಟ್ಟು 665 ಮನೆಗಳು ಹಾನಿಯಾಗಿದ್ದು, ಒಟ್ಟು 1.21 ಕೋಟಿ ರೂ. ಪರಿಹಾರವನ್ನು ಮನೆಹಾನಿ ಸಂತ್ರಸ್ತ ಲಾನುಭವಿಗಳಿಗೆ ಪಾವತಿಸಲಾಗಿದೆ ಎಂದರು.
ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಹಂತ-4 ರ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 130 ಕೋಟಿ ರೂ. ಮಂಜೂರಾಗಿದ್ದು, 320 ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ 2.0 ಅಡಿ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 2 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗುತ್ತದೆ. ಈ ಮೂಲಕ ಮಂಗಳೂರು ಮಹಾನಗರ ಪಾಲಿಕೆಗೂ 200 ಕೋಟಿ ರೂ. ನೀಡಲಾಗುತ್ತದೆ ಎಂದರು.
ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ.ಸಿಇಒ ಡಾ.ಆನಂದ್, ಮನಪಾ ಮೇಯರ್ ಸುೀರ್ ಶೆಟ್ಟಿ ಕಣ್ಣೂರು, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಪ್ರತಿಭಾ ಪುರಸ್ಕಾರ ವಿತರಣೆ, ಅಂಗಾಂಗ ದಾನ ಮಾಡಿದ ಕುಟುಂಬಕ್ಕೆ ಗೌರವ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ನಾನಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಧ್ವಜಾರೋಹಣದ ನಂತರ ಪೊಲೀಸ್ ವಾದ್ಯವೃಂದ, ಸಂಚಾರಿ ಪೊಲೀಸ್, ಅಬಕಾರಿ ಇಲಾಖೆ, ಗೃಹ ರಕ್ಷಕ ದಳ, ಆರ್ಎಸ್ ಪಿ ಬಾಲಕ- ಬಾಲಕಿಯರ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾ ದಳ ತಂಡಗಳು ಸೇರಿದಂತೆ ಒಟ್ಟು 16 ತಂಡಗಳಿಂದ ಸಚಿವರು ಗೌರವರಕ್ಷೆ ಸ್ವೀಕರಿಸಿದರು. ವಿದ್ಯಾರ್ಥಿಗಳು, ಪೊಲೀಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ವೇದಿಕೆಯಲ್ಲಿ ನಾನಾ ಗಣ್ಯರು ಉಪಸ್ಥಿತರಿದ್ದರು.