ಚಾಮರಾಜನಗರ : ಯಳಂದೂರು ಪಟ್ಟಣದ ಬಳೆಪೇಟೆಯಲ್ಲಿ ಬಾವಿಗೆ ಬಿದ್ದಿದ್ದ ಎರಡು ವಿಷಪೂರಿತ ಮಂಡಲದ ಹಾವುಗಳನ್ನು ಉರಗ ರಕ್ಷಕ ಸ್ನೇಕ್ ಮಹೇಶ್ ಭಾನುವಾರ ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟರು.
ಬಳೆಪೇಟೆಯ ಬಿ.ಆರ್.ಹಿಲ್ಸ್ ರಸ್ತೆಯಲ್ಲಿರುವ ಬಿ.ಟಿ.ಗೀತಾ, ವೈ.ಜಿ.ರಂಗರಾಜು ಅವರ ನಿವೇಶನದ ಹಿಂಭಾಗದಲ್ಲಿರುವ ಬಾವಿಯಲ್ಲಿ ಎರಡು ಹಾವುಗಳು ಬಿದ್ದು ಮೇಲೆ ಬರಲು ಒದ್ದಾಡುತ್ತಿದ್ದವು. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್, ಹಾವುಗಳನ್ನು ರಕ್ಷಣೆ ಮಾಡಿದರು.
ಹಾವುಗಳ ರಕ್ಷಣೆಗೆ ಮೊದಲು ದೊಡ್ಡದಾದ ಬಕೆಟ್ ಅನ್ನು ಬಾವಿಗೆ ಬಿಟ್ಟರು. ಆದರೆ ಬಕೆಟ್ ಒಳಗೆ ಹಾವುಗಳು ಸೇರದೆ ಸತತ ಪ್ರಯತ್ನ ವಿಫಲವಾಯಿತು. ಬಳಿಕ 9 ಕಟ್ಟಿಗೆಗಳಿಂದ ವಿಶೇಷ ಪರಿಕರ ಮಾಡಿ, ಅದಕ್ಕೆ ಇಟ್ಟಿಗೆ ಕಟ್ಟು ಬಾವಿಗೆ ಬಿಟ್ಟರು. ಬಳಿಕ ಹಾವುಗಳು ಆ ಕಟ್ಟಿಗೆ ಮೇಲೆ ಬಂದು ಕುಳಿತವು. ಬಳಿಕ ಆ ಕಟ್ಟಿಗೆಯನ್ನು ಮೇಲೆತ್ತಲಾಯಿತು. ಸತತ ಎರಡು ಗಂಟೆಯ ಕಾರ್ಯಾಚರಣೆ ನಡೆಸಿ ಹಾವುಗಳನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲೆತ್ತಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ನೇಕ್, ಷಷ್ಠಿ ಹಾಗೂ ನಾಗರ ಪಂಚಮಿಯಂದು ಹಾವುಗಳಿಗೆ ಹಾಲೆರೆಯುವ ಸಂಪ್ರದಾಯ ನಮ್ಮಲ್ಲಿದೆ. ಆದರೆ ಹಾವುಗಳು ಯಾವುದೇ ಕಾರಣಕ್ಕೂ ಹಾಲು ಕುಡಿಯುವುದಿಲ್ಲ. ಹುತ್ತಕ್ಕೆ ಹಾಲನ್ನು ಎರಯುವುದರಿಂದ ಹಾವುಗಳ ಪ್ರಾಣಕ್ಕೆ ತೊಂದರೆಯಾಗಲಿದೆ. ಹಾವುಗಳಿಗೆ ಅತಿ ದಣಿವಾದರೆ ಅಲ್ಪ ಪ್ರಮಾಣದಲ್ಲಿ ನೀರು ಕುಡಿಯುತ್ತವೆ ಹೊರತು ಹಾಲನ್ನು ಕುಡಿಯುವುದಿಲ್ಲ. ಹಾಗಾಗಿ ಯಾರೂ ಹಾವಿಗೆ ಹಾಲನ್ನೆರೆಯಬಾರದು. ಅದರ ಬದಲು ಅದೇ ಹಾಲನ್ನು ಅದೇ ದಿನ ಯಾರಾದರೂ ಅನಾಥರು, ನಿರ್ಗತಿಕರಿಗೆ ನೀಡಬೇಕು ಎಂದು ಸ್ನೇಕ್ ಮಹೇಶ್ ಸಲಹೆ ನೀಡಿದರು.