ಚಿರತೆ ಮರಿಗಳ ರಕ್ಷಣೆ

18 leopard
Published on

ಮುಂಡಗೋಡ: ತಾಲೂಕಿನ ಹುಲಿಹೊಂಡ ಗ್ರಾಮದ ಸಮೀಪ ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷಗೊಂಡಿದ್ದ ಎರಡು ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ರಕ್ಷಿಸಿ, ಕಬ್ಬು ಕಟಾವ ಮಾಡಲು ಸಹಕಾರ ನೀಡಿದರು.

ತಾಲೂಕಿನ ಹುಲಿಹೊಂಡ ಗ್ರಾಮದ ಸನಿಹದ ಕಬ್ಬಿನ ಗದ್ದೆಯಲ್ಲಿ ಚಿರತೆಯೊಂದು ಮರಿಗಳನ್ನು ಹಾಕಿದ್ದು ಕಬ್ಬು ಕಟಾವ ಮಾಡಲು ಹೋದ ಕಾರ್ಮಿಕರ ಮೇಲೆ ದಾಳಿ ಮಾಡಲು ಯತ್ನಿಸಿದ ಪರಿಣಾಮ ರೈತರು ಕಬ್ಬು ಕಟಾವ ಮಾಡದೆ ಹಾಗೆ ಬಿಟ್ಟಿದ್ದರು. ಗುರುವಾರ ಬೆಳಗ್ಗೆ ಹತ್ತಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಬಂಧಿಸಲು ಪಂಜರ, ಬಲೆ ಹಿಡಿದುಕೊಂಡು ಕಬ್ಬು ಕಟಾವ ಕಾರ್ಯ ಮಾಡಿಸಲಾಯಿತು. ಅಲ್ಲದೆ, ಎರಡು ಚಿರತೆ ಮರಿಗಳನ್ನು ರಕ್ಷಣೆ ಮಾಡಿ ಕಬ್ಬಿನ ಗದ್ದೆಯಲ್ಲಿಯೇ ಬಿಡಲಾಯಿತು. ತಾಯಿ ಚಿರತೆ ಬರುವುದೆಂದು ಸುತ್ತಲೂ ಪಟಾಕಿ ಹಾಗೂ ಡೊಳ್ಳು ಶಬ್ಧ ಮಾಡಿಸಲಾಯಿತು. ಆದರೆ, ತಾಯಿ ಚಿರತೆಯೂ ಬರಲಿಲ್ಲ. ಸದ್ಯ ಮರಿಗಳನ್ನು ಗದ್ದೆಯಲ್ಲಿ ರಕ್ಷಣೆ ಮಾಡಿ ಬಿಡಲಾಗಿದೆ.

ಕಳೆದ ಒಂದು ವಾರದಿಂದ ಕಬ್ಬಿನ ಗದ್ದೆಯಲ್ಲಿ ಎರಡು ಮರಿಗಳೊಂದಿಗೆ ಪ್ರತ್ಯೇಕ್ಷವಾಗಿದ್ದ ಚಿರತೆ ರೈತರಲ್ಲಿ ಆತಂಕ ಮೂಡಿಸಿತ್ತು. ರೈತರು ಗದ್ದೆಗೆ ತೆರಳಲು ಭಯ ಪಟ್ಟು ಕಬ್ಬು ಕಟಾವ ಮಾಡುವುದು ಸಹ ಅರ್ಧಕ್ಕೆ ಕೈ ಬಿಟ್ಟಿದ್ದರು. ಗುರುವಾರ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ಕಬ್ಬು ಕಟಾವ ಕಾರ್ಯವನ್ನು ಮುಕ್ತಾಯಗೊಳಿಸಲಾಯಿತು.

ಕಬ್ಬು ಕಟಾವ ಮಾಡಿರುವ ಗದ್ದೆಯಲ್ಲಿಯೆ ಎರಡು ಮರಿಗಳನ್ನು ರಕ್ಷಣೆ ಮಾಡಿ ಬಿಡಲಾಗಿದೆ. ಪಕ್ಕದಲ್ಲಿಯೆ ಅರಣ್ಯ ಇರುವುದರಿಂದ ತಾಯಿ ಚಿರತೆ ತನ್ನ ಮರಿಗಳನ್ನು ಕಾಡಿನಲ್ಲಿ ತೆಗೆದುಕೊಂಡು ಹೋಗುವ ಸಾಧ್ಯತೆಯಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದುಕೊಂಡು ಮುಂದಿನ ಕ್ರಮ ವಹಿಸಲಾಗುವುದು.> ವಾಗೀಶ ಬಿ.ಜೆ., ಆರ್‌ಎಫ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net