ಕೃಷ್ಣೆಯ ರಕ್ಷಣೆ ಪ್ರತಿಯೊಬ್ಬರ ಹೊಣೆ

ALMT 12
ಆಲಮಟ್ಟಿಯ ಪ್ರವಾಸಿ ಮಂದಿರದ ಉದ್ಯಾನದಲ್ಲಿ ಕೃಷ್ಣಾ ಜಲ ಕುಟುಂಬ ವತಿಯಿಂದ ಸೋಮವಾರ ಕೃಷ್ಣಾ ಜಲ ಸದ್ಭಾವ ಯಾತ್ರೆ ಕಾರ್ಯಕ್ರಮ ನಡೆಯಿತು.
Published on

ಆಲಮಟ್ಟಿ: ಕೃಷ್ಣಾ ನದಿಯ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ ಎಂದು ಧಾರವಾಡದ ವಾಲ್ಮಿಯ ಮಾಜಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದ ಉದ್ಯಾನದಲ್ಲಿ ಕೃಷ್ಣಾ ಜಲ ಕುಟುಂಬದವರು ಸೋಮವಾರ ಆಯೋಜಿಸಿದ್ದ ಕೃಷ್ಣಾ ಜಲ ಸದ್ಭಾವ ಯಾತ್ರೆಯಲ್ಲಿ ಅವರು ಮಾತನಾಡಿದರು.

ಕೃಷ್ಣಾ ನದಿಯು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮವಾಗಿ ಆಂಧ್ರದ ಹಂಸಾದೇವಿಯಲ್ಲಿ ಬಂಗಾಳಕೊಲ್ಲಿ ಸಮುದ್ರ ಸೇರುತ್ತದೆ. ಈ ನಾಲ್ಕು ರಾಜ್ಯದವರೆಲ್ಲರೂ ಸೇರಿ ಕೃಷ್ಣಾ ನದಿ ಸಂರಕ್ಷಿಸಬೇಕು. ಕೃಷ್ಣಾ ನದಿ ದೇಶದ ಮೂರನೇ ದೊಡ್ಡ ನದಿಯಾಗಿದ್ದು, ಇಂದು ಸಕ್ಕರೆ ಕಾರ್ಖಾನೆಯಿಂದ ಹೊರಬರುವ ಮಾಲಿನ್ಯವನ್ನು ಕೃಷ್ಣೆಯ ಒಡಲಿಗೆ ಬಿಡುವುದು, ನದಿಯಲ್ಲಿರುವ ಮರಳು ತೆಗೆವುದು, ನದಿ ಪಕ್ಕದ ಗಿಡಮರಗಳನ್ನು ನಾಶಪಡಿಸುವ ಮೂಲಕ ನಾವೆಲ್ಲರೂ ನದಿಯನ್ನು ಹಾಳು ಮಾಡುತ್ತಿದ್ದೇವೆ. ಹೀಗಾಗಿ ನದಿಯು ಮಹಾರಾಷ್ಟ್ರ ಕರ್ನಾಟಕ ಭಾಗದಲ್ಲಿ ಮೈದುಂಬಿ ಹರಿದು ಮುಂದೆ ತೆಲಂಗಾಣ ಹಾಗೂ ಆಂಧ್ರದಲ್ಲಿ ಬತ್ತಿಹೋಗುತ್ತಿದೆ. ಆದ್ದರಿಂದ ಕೃಷ್ಣಾ ನದಿ ತೀರದಲ್ಲಿರುವ ರೈತರು ಹಾಗೂ ನೀರಾವರಿ ತಜ್ಞರು ಸೇರಿ ಕೃಷ್ಣಾ ನದಿ ಉಳಿಸುವು ನಿಟ್ಟಿನಲ್ಲಿ ಈ ಜಲ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆಂಧ್ರದ ನೀರಾವರಿ ತಜ್ಞ ಸತ್ಯನಾರಾಯಣ ಬೋಳಿಶೆಟ್ಟಿ ಮಾತನಾಡಿ, ಕೃಷ್ಣಾ ನದಿಯು ನಾಲ್ಕು ರಾಜ್ಯಗಳ ಜೀವ ನದಿಯಾಗಿದೆ. ಲಕ್ಷಾಂತರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಕೋಟ್ಯಾಂತರ ಜನತೆಯ ನೀರಿನ ದಾಹ ತಣಿಸಿದೆ. ಹೀಗಾಗಿ ಕೃಷ್ಣಾ ನದಿ ಉಳಿಸುವ ಜವಾಬ್ದಾರಿ ನಮ್ಮಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಕೃಷ್ಣಾ ಕುಟುಂಬ ಎಂಬ ಸಂಘಟನೆ ಪ್ರಾರಂಭಿಸಿದ್ದೇವೆ ಎಂದರು.

ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಕೃಷ್ಣಾ ನದಿಗೆ ಉಪ ನದಿಗಳಾದ ಭೀಮಾ, ಡೋಣಿ, ಮಲಪ್ರಭಾ, ಘಟಪ್ರಭದಂತಹ ಹಲವಾರು ನದಿಗಳು ಬಂದು ಸೇರುತ್ತಿವೆ. ಆದರೆ, ಅನೇಕ ಕೃಷ್ಣೆಯ ಉಪನದಿಗಳು ಒತ್ತುವರಿಯಿಂದ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶದಿಂದ ನದಿಗಳಲ್ಲಿ ಹೂಳು ತುಂಬಿ ನಾಶವಾಗುತ್ತಿವೆ. ಇದನ್ನು ತಡೆಗಟ್ಟಲು ಇಂದು ನಾವೆಲ್ಲರೂ ಕೃಷ್ಣಾ ನದಿ ದಡದ ಜನರು ನದಿಯು ಮಾಲಿನ್ಯ ಆಗದ ಹಾಗೆ ಸಂಕಲ್ಪ ಮಾಡಬೇಕೆಂದು ತಿಳಿಸಿದರು.

ಮಹಾರಾಷ್ಟ್ರದ ನೀರಾವರಿ ತಜ್ಞ ನರೇಂದ್ರ ಚುಗ, ಆಲಮಟ್ಟಿ ಅಣೆಕಟ್ಟಿನ ಮುಖ್ಯಅಭಿಂತರ ಬಸವರಾಜ, ಕೃಷ್ಣಾ ಕೊಳ್ಳದ ಹೋರಾಟಗಾರ ಬಸವರಾಜ ಕುಂಬಾರ, ಭೀಮಾ ತೀರದ ಹೋರಾಟಗಾರ ಶಿವಕುಮಾರ ನಾಟಿಕಾರ ಮಾತನಾಡಿದರು.

ಅಪ್ಪಾಸಾಹೇಬ ಯರನಾಳ, ಸಂಜು ಬಿರಾದಾರ, ನಿಂಗಪ್ಪ ಅವಟಿ, ವೆಂಕಟೇಶ ಜಾಗೀರದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net