

ಮೈಸೂರು: ಶಾಸನಗಳನ್ನು 3ಡಿ ತಂತ್ರಜ್ಞಾನದ ಮೂಲಕ ಸ್ಕ್ಯಾನ್ ಮಾಡಿ ಸಂರಕ್ಷಣೆ ಮಾಡುವ ಹಾಗೂ ಡಿಜಿಟಲೀಕರಣ ಕೆಲಸವನ್ನು ಕೈಗೆತ್ತಿಕೊಂಡಿದ್ದು, ಈವರೆಗೂ 530 ಶಾಸನಗಳನ್ನು ಸಂರಕ್ಷಿಸಲಾಗಿದೆ ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಹೇಳಿದರು.
ನಗರದಲ್ಲಿರುವ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ಪರಂಪರೆ ದಿನ ಹಾಗೂ ಶಿಲಾ ಶಾಸನಗಳ ಸಂರಕ್ಷಣೆ’ ವಿಚಾರಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲಾಖೆಯಿಂದ ಶಾಸನ ಸಂರಕ್ಷಣಾ ಯೋಜನೆ ಜಾರಿಗೊಳಿಸಲಾಗಿದ್ದು, ಗ್ರಾಮವಾರು ಸಮೀಕ್ಷೆ ಸಹ ಮಾಡಲಾಗುತ್ತದೆ. ಗುರುತಿಸದೆ ಇರುವ ಶಾಸನಗಳು, ಪ್ರಾಚ್ಯ ವಸ್ತುಗಳನ್ನು ಪತ್ತೆ ಮಾಡಿ,ಸಂಶೋಧನೆ ನಡೆಸಲಾಗುವುದು. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಶಾಸನಗಳು, ಪ್ರಾಚ್ಯ ವಸ್ತುಗಳ ಸಂರಕ್ಷಿಸಲಾಗುವುದು. ಅವುಗಳಿಂದ ಮಹತ್ತರವಾದ ಮಾಹಿತಿಯೂ ದೊರೆಯಲಿದೆ ಎಂದರು.
ಶಾಸನಗಳು ನಾಶವಾದರೂ ಅವುಗಳಲ್ಲಿನ ಮಾಹಿತಿ ಸಂರಕ್ಷಿಸುವ ನಿಟ್ಟಿನಲ್ಲಿ ಡಿಜಿಟಲೀಕರಣ ಕಾರ್ಯ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಶಾಸನ ಮತ್ತು ಪ್ರಾಚ್ಯವಸ್ತುಗಳ ಸಂರಕ್ಷಣೆಗಾಗಿ ದತ್ತು ಸ್ವೀಕಾರ ಯೋಜನೆಯನ್ನೂ ಅನುಷ್ಠಾನಕ್ಕೆ ತರಲಾಗಿದೆ. ಕಾರ್ಪೋರೇಟ್ ಸಂಸ್ಥೆಗಳ ಸಿಎಸ್‌ಆರ್ ಅನುದಾನವನ್ನು ಬಳಸಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ 844 ಸಂರಕ್ಷಿತ ಸ್ಮಾರಕಗಳಿವೆ. ದೇಶದಲ್ಲೇ ಹೆಚ್ಚು ಸ್ಮಾರಕ ಸಂರಕ್ಷಣೆ ಮಾಡಿದ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನ ಹೊಂದಿದೆ ಎಂದರು.
ಯುನೆಸ್ಕೋ ಸಂಸ್ಥೆಯು ಕಳೆದ ವರ್ಷ ಬೇಲೂರು, ಹಳೇಬೀಡು, ಜಿಲ್ಲೆಯ ಸೋಮನಾಥಪುರ ದೇವಸ್ಥಾನವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದೆ. ವಿಶ್ವದಲ್ಲಿ ಜಾಗತಿಕ ಮಾನ್ಯತೆ ಪಡೆದ 1199 ಪಾರಂಪರಿಕ ತಾಣಗಳಿವೆ. ಈ ಪೈಕಿ 52 ತಾಣಗಳು ಭಾರತದಲ್ಲೂ, 4 ತಾಣಗಳು ಕರ್ನಾಟಕದಲ್ಲಿವೆ ಎಂದು ಹೇಳಿದರು.
ಈ ವಿಶ್ವ ಮಾನ್ಯತೆಯಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಉದ್ಯೋಗಾವಕಾಶ ವೃದ್ಧಿಯಾಗಿ ಪ್ರವಾಸೋದ್ಯಮವೂ ಪ್ರಗತಿ ಹೊಂದಲಿದೆ. ಪ್ರವಾಸೋದ್ಯಮವನ್ನೇ ಅವಲಂಬಿಸಿರುವವರ ಆರ್ಥಿಕ ಸ್ಥಿತಿಯೂ ಚೇತರಿಕೆಯಾಗಲಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಪ್ರಪಂಚಾದ್ಯಂತ ಪಾರಂಪರಿಕ ಸ್ಥಳ, ಸ್ಮಾರಕ ಸಂರಕ್ಷಣಾ ಕಾರ್ಯಕ್ಕೆ ವೇಗ ದೊರೆತಿದೆ. ಶಾಸನಗಳ ಆಧಾರದ ಮೇಲೆ ಪಠ್ಯಕ್ರಮ, ಪುಸ್ತಕ ರಚನೆಯಾಗುತ್ತಿದೆ. ಶಾಸನಗಳಿಂದ ಚರಿತ್ರೆ ತಿಳಿಯಬಹುದಾಗಿದೆ. ಹೊಸದಾಗಿ ಪತ್ತೆಯಾದ ಶಾಸನಗಳು ಹೊಸ ವಿಚಾರ ತಿಳಿಸುತ್ತವೆ. ಈ ಹಿನ್ನೆಲೆಯಲ್ಲಿ ಶಾಸನಗಳು, ಪ್ರಾಚ್ಯ ವಸ್ತುಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕೋರಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಮುಖ್ಯಸ್ಥ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ಮಾತನಾಡಿ, ರಾಜ್ಯದಲ್ಲಿ ಹಲವು ಪ್ರಾಚೀನ ಶಾಸನಗಳು, ಮಹತ್ತರವಾದ ಪಾರಂಪರಿಕ ಸ್ಥಳಗಳಿರುವುದರಿಂದ ರಾಜ್ಯದಲ್ಲಿ ವಿಶ್ವದರ್ಜೆಯ ಮ್ಯೂಸಿಯಂ ಸ್ಥಾಪನೆಯಾಗಬೇಕು ಎಂದು ಸಲಹೆ ನೀಡಿದರು.
ಇತಿಹಾಸ ರಚನೆಗೆ ಶಾಸನಗಳೇ ಆಧಾರ. ಇವುಗಳೇ ಮೂಲ ದಾಖಲೆಯಾಗಿವೆ. ಈ ಹಿಂದೆ ರಾಜರ ಆಳ್ವಿಕೆ ಕಾಲದಲ್ಲಿ ಅಂದಿನ ಪರಿಸ್ಥಿತಿ, ಸಮಾಜದಲ್ಲಿ ಆಚರಣೆ, ಆಡಳಿತ ಸೇರಿದಂತೆ ಇನ್ನಿತರ ಅಂಶಗಳುಳ್ಳ ಮಾಹಿತಿಯನ್ನು ಶಾಸನಗಳಲ್ಲಿ ನಮೂದಿಸಲಾಗುತ್ತಿತ್ತು. ಶಾಸನಗಳಿಂದ ಸಾಕಷ್ಟು ಅನುಮಾನಗಳು ನಿವಾರಣೆಯಾಗಲಿವೆ ಎಂದರು.
ಶಿಲಾಶಾಸನಗಳನ್ನು 3ಡಿ ಸ್ಕ್ಯಾನಿಂಗ್ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದ ಬೆಂಗಳೂರಿನ ಮಿಥಿಕ್ ಸೊಸೈಟಿ ಸಂಸ್ಥೆಯ ಉದಯ್‌ಕುಮಾರ್, ಶಾಸನಗಳ ಬಗ್ಗೆ ಜನರಿಗೆ ಜ್ಞಾನವಿಲ್ಲ. ಹೀಗಾಗಿ, ಅವುಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕನ್ನಡದ ಪ್ರಥಮ ಶಾಸನ ಹಲ್ಮಿಡಿ ಶಾಸನಕ್ಕೆ ಹಸು ಕಟ್ಟಲಾಗುತ್ತಿತ್ತು. ಇದರಿಂದ ಜಾನುವಾರುಗಳು ಮೈ ಉಜ್ಜಿದ್ದರಿಂದ ಹಲ್ಮಿಡಿ ಶಾಸನ ಸವೆದು ಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪುರಾತತ್ವ ಸಂರಕ್ಷಣಾ ಇಂಜಿನಿಯರ್ ಪುಟ್ಟಸ್ವಾಮಿ, ಸಿದ್ಧಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.