

ಹಿರಿಯೂರು: ಮುಗ್ಧ ಮನಸ್ಸಿನ ಮಕ್ಕಳ ರಕ್ಷಣೆ ಸರ್ವರ ಹೊಣೆ ಆಗಿದ್ದು, ಈ ನಿಟ್ಟಿನಲ್ಲಿ ಜನರು ಮತ್ತು ಮಕ್ಕಳಲ್ಲಿ ಕಾನೂನು ಅರಿವು ಮೂಡಿಸುವುದು ಎಲ್ಲ ಇಲಾಖೆಗಳ ಕರ್ತವ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಹೇಳಿದರು.
ಬಾಲ್ಯ ವಿವಾಹ ನಿಷೇಧ ಮತ್ತು ಪೋಕ್ಸೋ ಕುರಿತು ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭ್ರೂಣ ಹತ್ಯೆ ಮಾಡುವುದು ಹೆಣ್ಣು ಮಕ್ಕಳ ಮೇಲಿನ ಮೊದಲ ದೌರ್ಜನ್ಯ ಪ್ರಕರಣವಾಗುತ್ತದೆ. ವಯಸ್ಸಿನ ಅಂತರ ನೋಡದೆ ಹಾಗೂ ಶಾಲೆಗೆ ಕಳಿಸುವ ಮಕ್ಕಳನ್ನು ಬಾಲ್ಯ ವಿವಾಹಕ್ಕೆ ದೂಡುವುದು ಅಪರಾಧ ಎಂದರು.
ಹೆಣ್ಣು ಎಂದರೆ ತಾತ್ಸಾರ ಮನೋಭಾವನೆ ಬೆಳೆದಿದೆ. ಪಾಲಕರು ಅದರಿಂದ ಹೊರ ಬರಬೇಕು. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಸಾಧನೆಗೆ ಅವಕಾಶ ಕಲ್ಪಿಸಿದರೆ ಉತ್ತಮ ಭವಿಷ್ಯತ ರೂಪಿಸುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಬಹುದು ಎಂದು ಹೇಳಿದರು.
ಇಂದು ಮಹಿಳೆ ಎಲ್ಲ ಹಂತದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಆಮಿಷಕ್ಕೆ ಒಳಗಾಗದೆ ಸೇವೆ ಸಲ್ಲಿಸುತ್ತಾ, ಅಬಲೆಯಲ್ಲ, ಸಬಲೆ ಎಂದು ಸಾಧಿಸಿ ತೋರಿಸಿದ್ದಾಳೆ. ಇಂತಹ ಹೆಣ್ಣಿನ ಬಗ್ಗೆ ಸಮಾಜ ಕಳಕಳಿ ಹೊಂದಬೇಕು ಎಂದರು.
ಇಂದು ಕಾನೂನಿನ ಅರಿವಿದ್ದರೂ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದನ್ನು ಮಟ್ಟ ಹಾಕುವ ಪ್ರಯತ್ನ ನಡೆಯಬೇಕು. ಆಮಿಷಗಳಿಗೆ ಮಕ್ಕಳ ಜೀವನವನ್ನು ಹಾಳು ಮಾಡಬಾರದು. ಎಲ್ಲ ಮನೆಯಲ್ಲೂ ಹೆಣ್ಣು ಮಕ್ಕಳು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಎಎಸ್ಪಿ ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಬೆಂಗಳೂರು ಪೊಲೀಸ್ ತರಬೇತಿ ಕಾರ್ಯಾಲಯದ ತರಬೇತುದಾರ ಸಿ.ಜೆ.ಲೋಹಿತ್ ಮಾತನಾಡಿದರು.
ತಾಲೂಕು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಮೊಯಿನುದ್ದಿನ್, ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಶಿಲ್ಪಾ ತಿಮ್ಮಾಪುರ, ವಕೀಲರ ಸಂಘದ ತಾಲೂಕಾಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ, ಉಪಾಧ್ಯಕ್ಷೆ ಎಚ್.ಬೀನಾರಾಣಿ, ಕಾರ್ಯದರ್ಶಿ ಜಿ.ಚಿತ್ರಲಿಂಗಪ್ಪ, ಬಾಲಾ ನ್ಯಾಯ ಮಂಡಳಿ ಸದಸ್ಯೆ ಸುಮನಾ ಎಸ್.ಅಂಗಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಸವಿತಾ, ಮಾನವ ಹಕ್ಕು ಆಯೋಗದ ಸದಸ್ಯ ತಿಪ್ಪೇಸ್ವಾಮಿ ಇತರರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್, ಆರೋಗ್ಯ, ಶಿಕ್ಷಣ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ತಾಲೂಕು ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿತ್ತು.