

ಆನೇಕಲ್: ಕೋಡಿಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಗಾಯಗೊಂಡಿದ್ದ ಕಾಡೆಮ್ಮೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನ ಆಸ್ಪತ್ರೆ ವೈದ್ಯರ ತಂಡ ಸುರಕ್ಷಿತ ಚಿಕಿತ್ಸೆ ನೀಡಿದೆೆ.
ಆ.17ರಂದು ಕೋಡಿಹಳ್ಳಿ ಸಮೀಪದ ಕೇರಳಾಲಸಂದ್ರದಲ್ಲಿ ಒಂದೂವರೆ ವರ್ಷದ ಕಾಡೆಮ್ಮೆಯೊಂದು ಗಾಯಗೊಂಡು ನಿಶ್ಯಕ್ತಿಯಿಂದ ಬಿದ್ದಿತ್ತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನದ ಆಸ್ಪತ್ರೆ ಅರಣ್ಯಾಧಿಕಾರಿಗಳ ನೆರವಿನೊಂದಿಗೆ ಕಾಡೆಮ್ಮೆ ಸಂರಕ್ಷಿಸಿ ಬನ್ನೇರುಘಟ್ಟಕ್ಕೆ ತಂದಿದ್ದಾರೆ.
ಕಾಡೆಮ್ಮೆ ಮುಂಭಾಗದ ಬಲಗಾಲು ಮುರಿದಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನ ಉಪನ್ಯಾಸಕ ನಾಗರಾಜು, ನಿವೃತ್ತ ರೀಡರ್ ಡಾ.ವಸಂತ್‌ಶೆಟ್ಟಿ ಮತ್ತು ಉದ್ಯಾನವನದ ವೈದ್ಯ ಡಾ.ಉಮಾಶಂಕರ್ ನೇತೃತ್ವದಲ್ಲಿ ಕಾಡೆಮ್ಮೆಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಆರೋಗ್ಯವಾಗಿರುವ ಕಾಡೆಮ್ಮೆ ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯ ಡಾ.ಉಮಾಶಂಕರ್ ತಿಳಿಸಿದ್ದಾರೆ.