

ಮೈಸೂರು: ಉತ್ತಮ ಆಡಳಿತದಿಂದ ಮಾತ್ರ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎನ್.ಸತೀಶ್‌ಗೌಡ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ‘ಮಾನವ ಹಕ್ಕುಗಳು ಮತ್ತು ಉತ್ತಮ ಆಳ್ವಿಕೆ’ ವಿಷಯ ಕುರಿತು ಉಪನ್ಯಾಸ ನೀಡಿದರು.
ಭಾರತದಲ್ಲಿ ಅತಿ ಹೆಚ್ಚು ಕಾನೂನುಗಳು ಇದ್ದರೂ, ಅವುಗಳ ಅನುಷ್ಠಾನ ಕಡಿಮೆಯಾಗಿದೆ. ಹಾಗಾಗಿ, ಮಾನವ ಹಕ್ಕಿನ ಉಲ್ಲಂಘನೆಯಾದಾಗ, ಸರ್ಕಾರಗಳನ್ನು ಟೀಕೆ ಮಾಡುವುದನ್ನು ಬಿಟ್ಟು ಕಾನೂನಿನ ಬಗ್ಗೆ ಪ್ರಶ್ನಿಸಿದಾಗ ಉತ್ತಮ ಆಡಳಿತ ದೊರೆಯಲಿದೆ. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ರಾಜನೀತಿ ನಿರ್ದೇಶಕ ತತ್ವಗಳು ಮುಖ್ಯವಾದರೂ ಅವುಗಳ ಬಗ್ಗೆ ನಮ್ಮ ಜನಪ್ರತಿನಿಧಿಗಳಿಗೆ ಮಾಹಿತಿ ಕಡಿಮೆ ಇದೆ. ಹೀಗಾಗಿ ಕಾರ್ಯಾಗಾರ ನಡೆಸಿ, ರಾಜನೀತಿಯ ಬಗ್ಗೆ ತಿಳಿಸಿದಾಗ ಉತ್ತಮ ಆಡಳಿತ ಸಾಧ್ಯವಾಗುತ್ತದೆ. ಜ್ಞಾನ ಮತ್ತು ಮಾಹಿತಿ ಮಾನವ ಹಕ್ಕಿನ ಜೀವಾಳವಾಗಿದ್ದು, ಜನಪ್ರತಿನಿಧಿಗಳು ಈ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕಲಸಚಿವರಾದ ಪ್ರೊ.ಕೆ.ಎಲ್.ಎನ್.ಮೂರ್ತಿ, ಪ್ರವೀಣ್, ಶೈಕ್ಷಣಿಕ ಮುಖ್ಯಸ್ಥ ಪ್ರೊ.ಕಾಂಬ್ಳೆ ಅಶೋಕ್, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಅಧ್ಯಕ್ಷ ಡಾ.ಎನ್.ಆನಂದಗೌಡ, ಸಂಯೋಜನಾಧಿಕಾರಿ ಡಾ.ಎಸ್.ಎಸ್.ಜಾಹ್ನವಿ ಇದ್ದರು.