ಹೆಣ್ಣು ಮಗುವಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ

BLY- 25-3
ಬಳ್ಳಾರಿ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಚಾಲನೆ ನೀಡಿದರು.
Published on

ಬಳ್ಳಾರಿ: ಹೆಣ್ಣು ಮಗುವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದ್ದು, ಈ ದಿಸೆಯಲ್ಲಿ ಕುಟುಂಬದ ಸ್ವಾಸ್ಥ್ಯವನ್ನು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಹೇಳಿದರು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಎ.ಎನ್.ಎಂ ತರಬೇತಿ ಕೇಂದ್ರ, ಮಹಿಮಾ ನರ್ಸಿಂಗ್ ಕಾಲೇಜು ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರ ಹೆಣ್ಣು ಮಗುವಿನ ಉಳಿವಿಗಾಗಿ ಭ್ರೂಣ ಲಿಂಗಪತ್ತೆ ತಂತ್ರ ನಿಷೇಧ ಕಾಯ್ದೆ 1994ರ ಕಾಯ್ದೆ ಅಡಿಯಲ್ಲಿ ಹೆಣ್ಣು ಭ್ರೂಣ ಪತ್ತೆ ಮಾಡುವವರನ್ನು ಮತ್ತು ಕೇಳುವವರನ್ನು ಜೈಲು ಶಿಕ್ಷೆ ಹಾಗೂ ದಂಡವಿದೆ. ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ದಂಡ ಹೆಚ್ಚಿಸುವ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಕುಟುಂಬದ ಕಣ್ಣಾಗಿರುವ ಹೆಣ್ಣನ್ನು ಬೆಳೆಸಿ, ಉಳಿಸಿ, ಓದಿಸುವ ಮೂಲಕ ಭವ್ಯ ಭಾರತದ ಅಡಿಪಾಯಕ್ಕೆ ನಾವೆಲ್ಲರೂ ಕಟ್ಟಬದ್ದರಾಗಬೇಕಿದೆ ಎಂದರು.

ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿ ಡಾ.ರವಿಶಂಕರ್ ಮಾತನಾಡಿ, ಹೆಣ್ಣು ಮಗುವಿನ ಸುರಕ್ಷತೆಗಾಗಿ ಮತ್ತು ಹೆಣ್ಣು ಮಗುವಿನ ಉಳಿವಿಗಾಗಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಲ್ಲಿ ಯಾವುದೇ ಸಂದರ್ಭದಲ್ಲಿ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಹೆಣ್ಣು ಮಗುವಿನ ಭ್ರ್ರೂಣವನ್ನು ಹೇಳದಂತೆ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದು, ಸಾರ್ವಜನಿಕರು ಸಹ ಭ್ರೂಣದ ಮಾಹಿತಿಯನ್ನು ಕೇಳಬಾರದು ಎಂದು ವಿನಂತಿಸಿದ ಅವರು, ಸಮಾಜದ ಎರಡು ನಾಣ್ಯಗಳಾದ ಗಂಡು-ಹೆಣ್ಣಿಗೆ ಸಮಾನ ಅವಕಾಶಗಳನ್ನು ನಾವೆಲ್ಲರೂ ನೀಡಬೇಕೆಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡಲು ಗಂಡು-ಹೆಣ್ಣು ನಾಣ್ಯದ ಎರಡು ಮುಖಗಳು ಇರುವಂತೆ ಕುಟುಂಬದ ಹೆಣ್ಣು ಮಗು ನೂರು ಗಂಡು ಮಕ್ಕಳಿಗೆ ಸಮವಾಗಿದ್ದಾಳೆ. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಗಳ ಸಾಧನೆ ದೇಶಕ್ಕೆ ಮುಕುಟವಾಗುವಂತೆ ಸಾಧನೆಗಳನ್ನು ಮಾಡುತ್ತಿದ್ದು, ಹಲವಾರು ಕ್ರೀಡಾಪಟುಗಳು ರಾಜಕೀಯ ಕ್ಷೇತ್ರಗಳಲ್ಲಿಯೂ ಇದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಹೆಣ್ಣು ಮಗುವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಐಎಂಎ ಕಾರ್ಯದರ್ಶಿ ಡಾ.ರಾಘವೇಂದ್ರ, ಉಪಾಧ್ಯಕ್ಷ ಡಾ.ಮಾಣಿಕ್‌ರಾವ್ ಕುಲಕರ್ಣಿ, ಜಂಟಿ ಕಾರ್ಯದರ್ಶಿ ಡಾ.ಸಂಗೀತಾ ಕಟ್ಟಿಮನಿ, ಮಹಿಮಾ ಸಂಸ್ಥೆಯ ಡಾ.ಮಲ್ಲಿಕಾರ್ಜುನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ, ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗದ ಅರುಣ್‌ಕುಮಾರ್, ಗೋಪಾಲ್.ಕೆ.ಎಚ್., ನವೀನ್, ಎ.ಎನ್.ಎಂ ತರಬೇತಿ ಕೇಂದ್ರದ ಶಿವಪ್ಪ ಇನ್ನಿತರರು ಜಾಥಾದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net