

ಶಿರಸಿ: ಅಲ್ಪಸಂಖ್ಯಾತರು ರಾಷ್ಟ್ರದ ಮುಖ್ಯವಾಹಿನಿಗೆ ಬರದಂತೆ ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ. ತಮ್ಮ ಮತಬ್ಯಾಂಕ್ ಮಾಡಿಕೊಳ್ಳುವ ಸಲುವಾಗಿ ಅವರಲ್ಲಿ ಪ್ರತ್ಯೇಕ ಮಾನಸಿಕತೆ ಬೆಳೆಯುವಂತೆ ಮಾಡುತ್ತಿದೆ. ಹುಬ್ಬಳ್ಳಿ ಗಲಭೆಕೋರ 157 ಜನರ ಮೇಲಿನ ಪ್ರಕರಣ ವಾಪಸ್ ಪಡೆದು ಅಪರಾಧಿಗಳಿಗೆ ರಕ್ಷಣೆ ನೀಡುವ ಕಾರ್ಯಕ್ಕೂ ಕಾಂಗ್ರೆಸ್ ಮುಂದಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, 2022ರಲ್ಲಿ ಕಿಡಿಗೇಡಿಗಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬೆಂಕಿ ಹಚ್ಚಿದ್ದು, ಜಗತ್ತಿಗೇ ಗೊತ್ತಿದೆ. ಪೊಲೀಸ್ ಸಿಬ್ಬಂದಿ ಸಹ ಈ ಘಟನೆಯಿಂದ ಗಾಯಗೊಂಡಿದ್ದರು. ಅಂತವರ ರಕ್ಷಣೆಗೆ ರಾಜ್ಯ ಸರ್ಕಾರ ನಿಲ್ಲುತ್ತಿರುವುದರ ಪರಿಣಾಮವಾಗಿಯೇ ಪಾಕಿಸ್ತಾನ್ ಜಿಂದಾಬಾದ್ ಎನ್ನುವವರು, ಆಟೋಗಳಿಗೆ ಪ್ಯಾಲಿಸ್ತೇನ್ ಧ್ವಜ ಅಳವಡಿಸಿಕೊಂಡು ಹೋಗುವವರು ಜಾಸ್ತಿಯಾಗುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಬ್ರಿಟಿಷರು ವಿಭಜಿಸಿ ಆಳ್ವಿಕೆ ನಡೆಸಿದ್ದರು. ಅದೇ ರೀತಿ ಈಗ ಕಾಂಗ್ರೆಸ್ ಸಹ ಮಾಡುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಮೂಡಿಸಿದೆ ಎಂದರು.
ಹುಬ್ಬಳ್ಳಿ ಕಿಡಿಗೇಡಿಗಳ ಮೇಲಿನ ಕೇಸ್ ವಾಪಸ್ ಪಡೆದಿರುವುದು ಕಾಂಗ್ರೆಸ್ ಸರ್ಕಾರ ಮಾಡಿರುವ ಬಹುದೊಡ್ಡ ಅಪರಾಧ. ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯ ರಾಷ್ಟ್ರದ ಮುಖ್ಯವಾಹಿನಿಗೆ ಬರಬಾರದು ಎನ್ನುವ ನೀತಿ ಅಳವಡಿಸಿಕೊಂಡಿದೆ. ತನ್ನ ಮತ ಬ್ಯಾಂಕ್ ಒಡೆದು ಹೋಗಬಾರದು ಎಂಬುದೇ ಕಾಂಗ್ರೆಸ್ನ ಉದ್ದೇಶವಾಗಿದ್ದರೆ ಅದು ರಾಷ್ಟ್ರಕ್ಕೇ ಅಪಾಯಕಾರಿಯಾಗಲಿದೆ ಎಂದರು. ಜಾತಿ ಗಣತಿಯಲ್ಲಿ ಹಿಂದುಗಳ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುವಾಗ ಜಾತಿಯೇ ಅವರಿಗೆ ಮುಖ್ಯವಾಗುತ್ತದೆ. ಆದರೆ, ಮುಸ್ಲಿಂ ಸಮುದಾಯದಲ್ಲಿಯೂ ಜಾತಿಗಳಿವೆ, ಅಲ್ಲೂ ಬಡವರಿದ್ದಾರೆ. ಆ ಜಾತಿಗಳ ಬಗ್ಗೆ ಏಕೆ ಅವರು ಮಾತನಾಡುವುದಿಲ್ಲ? ವಕ್ಪ್ ಕಾಯ್ದೆ ಮೂಲಕ ಮುಸ್ಲಿಮರನ್ನು ವಿಭಜಿಸಲಾಗುತ್ತಿದೆ. ಮುಸ್ಲಿಮರನ್ನು ವಿವಿಧ ಕಾಯ್ದೆ ಬಳಸಿ ಅವರಿಗೆ ತಾವು ಬೇರೆ ಎಂಬ ಭಾವನೆ ಬೆಳೆಸಿ, ಅವರನ್ನು ಸಮಾಜದ ಮುಖ್ಯವಾಹಿನಿಯಿಂದ ಹೊರಗಿಡಲಾಗುತ್ತಿದೆ. ಈ ಷಡ್ಯಂತ್ರ ಮುಸ್ಲಿಮರು ಅರಿಯದಿದ್ದರೆ ಅವರಲ್ಲಿ ಪ್ರತ್ಯೇಕತಾ ಭಾವನೆ ಹಿಂದೆ ಬೆಳೆದಂತೆ ಮತ್ತೆ ಬೆಳೆಯುವ ಸಾಧ್ಯತೆ ಇದೆ. ಇದಕ್ಕೆ ಬಿಜೆಪಿ ಅವಕಾಶ ಮಾಡಿಕೊಡುವುದಿಲ್ಲ ಎಂದರು.
ರಾಜ್ಯದಲ್ಲಿ ಸರ್ಕಾರ ಇದೆ, ಆಡಳಿತ ಇಲ್ಲ ಎಂಬ ಸ್ಥಿತಿ ಇದೆ. ಪ್ರತಿ ದಿನ ಮಂತ್ರಿಗಳೆಲ್ಲ ನ್ಯಾಯಾಲಯದಲ್ಲೇ ಸಮಯ ಕಳೆಯುತ್ತಿದ್ದಾರೆ. ರಾಜಕೀಯ ದ್ವೇಷ, ಸೇಡಿನಲ್ಲೇ ಅವರ ದಿನ ಕಳೆಯುತ್ತಿದೆ. ಹಿಂದೆ ಬಿಜೆಪಿ ಸರ್ಕಾರದ ಲೋಪ ಏನಾದರೂ ಇದೆಯೇ ಎಂದು ಶೋಧದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರತರಾಗಿದ್ದಾರೆ. ತನ್ನ ಖುರ್ಚಿ ಉಳಿಸಿಕೊಂಡು ಕೇಂದ್ರ ಕಾಂಗ್ರೆಸ್ ನಾಯಕರನ್ನು ಮೆಚ್ಚಿಸುವ ಕಸರತ್ತು ನಡೆಸುತ್ತಿದ್ದಾರೆ. ಅಭಿವೃದ್ಧಿಗೆ ಹಣ, ಅಂಗನವಾಡಿ ಕಾರ್ಯಕರ್ತೆಯರಿಗೂ ಹಣ ನೀಡಲು ಸಾಧ್ಯವಾಗದ ಆರ್ಥಿಕ ಸ್ಥಿತಿ ರಾಜ್ಯದಲ್ಲಿ ಇದೆ. ಭ್ರಷ್ಟಾಚಾರ ಮಿತಿ ಮೀರಿದೆ. ಭ್ರಷ್ಟಾಚಾರವನ್ನೇ ಸರ್ಕಾರೀಕರಣಗೊಳಿಸಲಾಗಿದೆ. ಕಾನೂನು ಶಾಂತಿ ಸುವ್ಯವಸ್ಥೆ ಹದಗೆಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದೇ ಮುಡಾ ಹಗರಣವನ್ನು ನಿಷ್ಪಕ್ಷವಾಗಿ ಮಾಡಲು ಸಾಧ್ಯವಿಲ್ಲ. ರಾಜ್ಯಾದ್ಯಂತ ಅತಿವೃಷ್ಟಿಯಿಂದ ರೈತರು ಬೆಳೆ ಹಾನಿ ಅನುಭವಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ಪರಿಹಾರ ನೀಡುತ್ತಿಲ್ಲ ಎಂದರು.
ಪ್ರಶ್ನೆಗೆ ಉತ್ತರಿಸಿದ ಕಾಗೇರಿ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣದ ಬಗ್ಗೆ ಆಗ್ರಹ ಜೋರಾಗಿದೆ. ಇಂತ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇದ್ದ ವೈದ್ಯರನ್ನು ಬೇರೆಡೆ ವರ್ಗ ಮಾಡ ಹೊರಟಿದೆ. ಅವರ ಸ್ಥಾನಕ್ಕೆ ಬೇರೆ ವೈದ್ಯರನ್ನು ನೇಮಕ ಮಾಡದೇ ಈ ರೀತಿ ವರ್ಗ ಮಾಡುವುದು ಸೂಕ್ತವಲ್ಲ ಎಂದರು.
ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಪ್ರಮುಖರಾದ ಸದಾನಂದ ಭಟ್, ಆನಂದ ಸಾಲೇರ, ನಾಗರಾಜ ನಾಯ್ಕ, ಶ್ರೀಕಾಂತ ನಾಯ್ಕ, ನಂದನ ಸಾಗರ, ಇತರರಿದ್ದರು.