ಚಿಕ್ಕನಾಯಕನಹಳ್ಳಿ: ಗೂಡ್ಸ್ ವಾಹನದಲ್ಲಿ -ಸಾಗಿಸುತ್ತಿದ್ದ ಸೀಮೆ ಹಸು ಕರುಗಳನ್ನು ಬಜರಂಗದಳದ ಸದಸ್ಯರು ಶನಿವಾರ ತಡರಾತ್ರಿ ರಸಿದ್ದಾರೆ. ಹುಳಿಯಾರು ಕಡೆಯಿಂದ ತುಮಕೂರಿನ ಗೋಡೆಕೆರೆಯ ಸೋಮನಹಳ್ಳಿ ಮಾರ್ಗವಾಗಿ ಅನುಮಾನಾಸ್ಪದವಾಗಿ ಸಾಗುತ್ತಿದ್ದ ಗೂಡ್ಸ್ ವಾಹನವನ್ನು ಬಜರಂಗದಳದ ಸದಸ್ಯರು ತಡೆದಿದ್ದಾರೆ. ಈ ವೇಳೆ ವಾಹನದಲ್ಲಿ 45 ಸೀಮೆಹಸು ಕರುಗಳು ಕಂಡುಬಂದಿವೆ. ಆದರೆ, ಇದರಲ್ಲಿ 15 ಕರು ಮೃತಪಟ್ಟಿದ್ದವು. ಕೂಡಲೇ ಎಚ್ಚೆತ್ತ ಬಜರಂಗದಳದ ಕಾರ್ಯಕರ್ತರು ವಾಹನವನ್ನು ಚಿಕ್ಕನಾಯಕನಹಳ್ಳಿ ಠಾಣೆಗೆ ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರ್ಯಾಚರಣೆ ವೇಳೆ ವಾಹನದಲ್ಲಿ ಇದ್ದವರು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 30 ಕರುಗಳನ್ನು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಗೋಶಾಲೆಗೆ ಬಿಡಲಾಗಿದೆ. ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.