ಗ್ರಾಹಕರ ಹಕ್ಕುಗಳ ಸಂರಕ್ಷಣೆ ಸರ್ಕಾರದ ಹೊಣೆ;ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅಭಿಮತ

consu
Published on

ಬೆಂಗಳೂರು: ಗ್ರಾಹಕರು ದೇಶದ ಆರ್ಥಿಕ ವ್ಯವಸ್ಥೆಯ ಕೇಂದ್ರಬಿಂದು. ಆದ್ದರಿಂದ ಗ್ರಾಹಕರಿಗೆ ಆಗುವ ಮೋಸ, ವಂಚನೆಯನ್ನು ತಪ್ಪಿಸಲು ಇರುವ ಗ್ರಾಹಕ ಹಕ್ಕುಗಳ ಸಂರಕ್ಷಣೆ ಸರ್ಕಾರದ ಹೊಣೆಯಾಗಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಹಕರ ಹಕ್ಕುಗಳನ್ನು ನೆನಪಿಸುವುದು ಹಾಗೂ ಜಾಗೃತಿ ಮೂಡಿಸುವುದಕ್ಕೆ ಗ್ರಾಹಕರ ದಿನಾಚರಣೆ ಪೂರಕವಾಗಿದೆ. ಮೊಟ್ಟ ಮೊದಲ ಬಾರಿಗೆ 1986ರಲ್ಲಿ ಗ್ರಾಹಕರ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಯಾಗಿದ್ದು, ಅಂದಿನಿಂದ ರಾಷ್ಟ್ರವ್ಯಾಪಿ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಗ್ರಾಹಕರು ಹಣ ಕೊಟ್ಟು ಯಾವುದೇ ಪದಾರ್ಥ ಖರೀದಿಸುವಾಗ ಅಥವಾ ಯಾವುದೇ ಸೇವೆಯನ್ನು ಪಡೆದುಕೊಳ್ಳುವಾಗ ವಂಚನೆಯಾಗಬಾರದು. ಮಾರುಕಟ್ಟೆಯಲ್ಲಿ ಮಾಧ್ಯಮಗಳ ಮೂಲಕ ಗ್ರಾಹಕರನ್ನು ದಿಕ್ಕು ತಪ್ಪಿಸುವ ಯತ್ನ ನಿರಂತರವಾಗಿ ನಡೆಯುತ್ತಿದೆ. ಅಂತಹ ಜಾಹಿರಾತುಗಳ ಬಗ್ಗೆ ಎಚ್ಚರವಿರಬೇಕು. ವಿಶೇಷವಾಗಿ ಆಹಾರ ಮತ್ತು ಔಷಧಿ ವ್ಯಾಪಾರದಲ್ಲಿ ಆಗುವ ವಂಚನೆ ಅತ್ಯಂತ ಅಪಾಯಕಾರಿ. ಕೃತಕ ಕೆಮಿಕಲ್‌ಯುಕ್ತ ಬಣ್ಣ ಹಾಕಿದ ಆಹಾರ ಪದಾರ್ಥವನ್ನು ಸೇವಿಸುವುದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಈ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲು ಇಲಾಖೆ ಕೆಲಸ ಮಾಡುತ್ತಿದೆ ಎಂದು ಡಾ.ಕೃಷ್ಣ ವಿವರಿಸಿದರು.

ಕಾರ್ಯಕ್ರಮದಲ್ಲಿ ಕಲಬೆರಕೆ ಮತ್ತಿತರ ವಂಚನೆಗಳ ಕುರಿತು ವಿವಿಧ ಪ್ರಾತ್ಯಕ್ಷಿಕೆ ಮಾಡಲಾಯಿತು. ಸಚಿವ ಕೆ.ಎಚ್.ಮುನಿಯಪ್ಪ ವೀಡಿಯೋ ಸಂದೇಶದ ಮೂಲಕ ಗ್ರಾಹಕರ ದಿನಾಚರಣೆಯ ಮಹತ್ವ ತಿಳಿಸಿದರು.

ಸಮಾರಂಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಂ.ವಿ.ಚಂದ್ರಕಾಂತ, ಅನಿತಾಲಕ್ಷ್ಮಿ, ಸುಜಾತ ಹೊಸಮನಿ, ಲಿಂಗರಾಜಕೋಟೆ, ವಿಜಯಲಕ್ಷ್ಮಿ, ಎಂಎಸ್‌ಎನ್ ಬಾಬು, ಹೇಮಲತ ಜಾನಕಿ, ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net