ಜಾನುವಾರುಗಳ ರಕ್ಷಣೆ ಅಗತ್ಯ : ಸಚಿವ ಬಿ.ನಾಗೇಂದ್ರ

BLY-26-2
ಬಳ್ಳಾರಿ ನಗರದ ಜಿಲ್ಲಾ ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಜಾನುವಾರುಗೆ 4ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಚಾಲನೆ ನೀಡಿದರು.
Published on

ಬಳ್ಳಾರಿ : ಜಾನುವಾರು ರೈತರ ಬೆನ್ನೆಲುಬು ಆಗಿದ್ದು, ಅವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.

ನಗರದ ಜಿಲ್ಲಾ ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಜಾನುವಾರುಗೆ 4ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಜಾನುವಾರುಗಳಿಗೆ ತಾಯಿ ಸ್ಥಾನವನ್ನು ನೀಡಲಾಗಿದೆ. ರೈತರ ಬೆನ್ನೆಲುಬು ಆಗಿ ಅವುಗಳು ದುಡಿಯುತ್ತಿವೆ. ಆದರೆ ಕಾಲುಬಾಯಿ ರೋಗವು ಜಾನುವಾರುಗಳಲ್ಲಿ ಬಹಳ ದೊಡ್ಡ ಸಮಸ್ಯೆಯಾಗಿದೆ. ವಿಶೇಷವಾಗಿ ಇದು ವೈರಸ್‌ನಿಂದ ಬರುವ ಕಾಯಿಲೆಯಾಗಿದೆ. ಈ ಕಾಯಿಲೆ ಒಂದರೆಡು ದಿನಗಳಲ್ಲಿ ವಾಸಿಯಾಗುವಂತಹದ್ದಲ್ಲ. ಬದಲಾಗಿ ಹಂತ ಹಂತವಾಗಿ ಚಿಕಿತ್ಸೆ ನೀಡಲು ಸರ್ಕಾರವು ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರತಿಯೊಬ್ಬ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಹನುಮಂತ ನಾಯ್ಕ ಕಾರಬಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸೆ.36ರಿಂದ ಅ.25 ರವರೆಗೆ 4ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮವು 30 ದಿನಗಳ ಅವಧಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಚಾಲನೆಯಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 1,80,206 ಜಾನುವಾರುಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಸೀಳು ಗೊರಸು ಇರುವ ದನ-ಎಮ್ಮೆಗಳಲ್ಲಿ ಕಾಣಿಸಿಕೊಳ್ಳುವ ಕಾಲು ಬಾಯಿ ರೋಗ ಲಸಿಕೆ ವರ್ಷಕ್ಕೆ ಎರಡು ಬಾರಿ ಹಾಕಲಾಗುತ್ತಿದೆ ಎಂದು ತಿಳಿಸಿದರು.

ಇಲ್ಲಿಯವರೆಗೆ ಎಫ್‌ಎಂಡಿ ಸಿಪಿ ಯಲ್ಲಿ 17 ಬಾರಿ ಲಸಿಕೆ ಹಾಕಿದ್ದು, 4ನೇ ಸುತ್ತಿನ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, 2030 ರ ವರೆಗೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

78 ಇಲಾಖಾ ಲಸಿಕಾ ಸಿಬ್ಬಂದಿ ಹಾಗೂ 32 ಇಲಾಖೇತರ ತರಬೇತಿ ಪಡೆದಿರುವ ಲಸಿಕಾದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದ ಅವರು, ಜಾನುವಾರುಗಳಿಗೆ ನೀಡುವ ಲಸಿಕೆಯನ್ನು ಶೀತಲ ಸರಪಳಿಯಲ್ಲಿ ಸಂಗ್ರಹಿಸಲಾಗಿದ್ದು, ಲಸಿಕಾ ಅಭಿಯಾನವನ್ನು ಪಲ್ಸ್ ಪೋಲಿಯೋ ಮಾದರಿಯಲ್ಲಿ ರೈತರ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಲಸಿಕೆ ಹಾಕಲಾಗುವುದು ಎಂದರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಬಳ್ಳಾರಿ ಜಿಲ್ಲೆಗೆ ಒಟ್ಟು 6 ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳು ಮಂಜೂರಾಗಿವೆ. ಪ್ರತಿ ತಾಲೂಕಿಗೆ ಒಂದರಂತೆ ಹಾಗೂ ಪಾಲಿಕ್ಲಿನಿಕ್‌ನಲ್ಲಿ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನದ ಸೇವೆ ಲಭ್ಯವಿದ್ದು, 1962 ಸಹಾಯವಾಣಿಗೆ ಕರೆ ಮಾಡಿದಲ್ಲಿ ರೈತರ ಮನೆ ಬಾಗಿಲಿಗೆ ತೆರಳಿ ತುರ್ತು ಚಿಕಿತ್ಸೆಯನ್ನು ಒದಗಿಸಲಿದೆ. ವಾಹನದಲ್ಲಿ ಪಶು ವೈದ್ಯರು, ಪಶು ವೈದ್ಯಕೀಯ ಸಹಾಯಕರು/ವಾಹನ ಚಾಲಕರು ಸೇವೆ ನೀಡುತ್ತಾರೆ. 1962 ತುರ್ತು ಚಿಕಿತ್ಸೆ ವಾಹನದಲ್ಲಿ ತುರ್ತು ಔಷಧಗಳು ಮತ್ತು ಇತರ ಮೂಲ ಸೌಕರ್ಯಗಳು ಇರಲಿವೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ, ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಆರ್.ಶ್ರೀನಿವಾಸ, ಪ್ರಯೋಗಾಲಯದ ತಾಂತ್ರಿಕ ಸಹಾಯಕ ಡಾ.ರಾಜಶೇಖರ್, ಪಶು ಸಖಿಯರು, ಜಿಲ್ಲಾ ಪಶು ವೈದ್ಯಕೀಯ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಇತರರು ಹಾಜರಿದ್ದರು.

ಇದೇ ವೇಳೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆ - ಸಂಚಾರಿ ತುರ್ತು ಪಶು ಚಿಕಿತ್ಸಾ ಆಂಬುಲೆನ್ಸ್ ವಾಹನಗಳಿಗೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net