ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿ ರಕ್ಷಣೆ

29HNL1
Published on

ಹಾನಗಲ್ಲ: ಅರಣ್ಯ ಪ್ರದೇಶದಿಂದ ಹೊಲಕ್ಕೆ ನುಗ್ಗಿದ ಸಂದರ್ಭದಲ್ಲಿ ಬೇಲಿಯಲ್ಲಿ ಸಿಲುಕಿ ಗಾಯಗೊಂಡಿದ್ದ ಕರಡಿಯನ್ನು ಗದಗ ಮೃಗಾಲಯದ ಸಿಬ್ಬಂದಿ ರಕ್ಷಿಸಿ, ಚಿಕಿತ್ಸೆ ನೀಡಿದ ಘಟನೆ ತಾಲೂಕಿನ ಶಿರಗೋಡ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಶಿರಗೋಡ ಗ್ರಾಮದ ರೈತರಾದ ಪುಟ್ಟಪ್ಪ ಮಡಿವಾಳರ ಹಾಗೂ ಲೋಕೇಶ ಚಲುವಾದಿ ಅವರ ಮಾವಿನ ತೋಟ ಹಾಗೂ ಹೊಲದ ಮಧ್ಯೆ ಹಾಕಲಾಗಿದ್ದ ತಂತಿ ಬೇಲಿಯಲ್ಲಿ ಕರಡಿ ಸಿಲುಕಿಕೊಂಡಿತ್ತು. ಗ್ರಾಮದ ಪಕ್ಕದಲ್ಲಿನ ಹನುಮನಕೊಪ್ಪ ಅರಣ್ಯ ಪ್ರದೇಶದಿಂದ ಮಾವಿನ ತೋಟ ಹಾಗೂ ಭತ್ತದ ಜಮೀನಿಗೆ ಕರಡಿ ಆಹಾರ ಅರಸಿ ಬಂದಿತ್ತು ಎನ್ನಲಾಗಿದೆ.

ಬೆಳಗ್ಗೆ 8 ಗಂಟೆಯ ಸುಮಾರಿಗೆ ತಂತಿ ಬೇಲಿಯಲ್ಲಿ ಸಿಲುಕಿದ್ದ 6 ವರ್ಷದ ಹೆಣ್ಣು ಕರಡಿಯ ಆಕ್ರಂದನ ಗ್ರಾಮಸ್ಥರ ಗಮನಕ್ಕೆ ಬಂದು, ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದರು. ಇದರಿಂದ ಕರಡಿ ಗಾಬರಿಗೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಾಕಿ ತಪ್ಪಿಸಿಕೊಂಡು ಹೋಗದಂತೆ ಮಾಡಿದರು. ಕರಡಿ ನೋಡಲು ಮಧ್ಯಾಹ್ನದ ಹೊತ್ತಿಗೆ 700ಕ್ಕೂ ಹೆಚ್ಚು ಜನ ಜಮಾಯಿಸಿದ್ದರು.

ಗಾಯಗೊಂಡಿದ್ದ ಕರಡಿಯನ್ನು ತಂತಿ ಬೇಲಿಯಿಂದ ಬಿಡಿಸಿ, ಚಿಕಿತ್ಸೆ ನೀಡಬೇಕಾದ ಹಿನ್ನೆಲೆಯಲ್ಲಿ ಗದಗ ಮೃಗಾಲಯದಿಂದ ಅರವಳಿಕೆ ತಜ್ಞರು ಹಾಗೂ ಟ್ರಾಂಕ್ಯೂಲೆಟರ್ ತಂಡ ಕರೆಸಲಾಯಿತು. ಹಾನಗಲ್ಲಿನ ಪಶು ವೈದ್ಯಾಧಿಕಾರಿ ಡಾ. ಗಿರೀಶ ರೆಡ್ಡೇರ ಸಹಯೋಗದಲ್ಲಿ ಐವರು ಅಧಿಕಾರಿಗಳ ತಂಡ ಕರಡಿಗೆ ಅರವಳಿಕೆ ಮದ್ದು ನೀಡಿ, ಪ್ರಾಥಮಿಕ ಚಿಕಿತ್ಸೆ ಒದಗಿಸಿದರು. ನಂತರ ಬೋನಿನಲ್ಲಿ ಕರಡಿಯನ್ನು ಸಾಗಿಸಿ ಮುಂಡಗೋಡ ತಾಲೂಕಿನ ಕಾತೂರ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.

ವಲಯ ಅರಣ್ಯಾಧಿಕಾರಿ ಪರಮೇಶ್ವರಪ್ಪ ಪೇಲನವರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಈ ಭಾಗದಲ್ಲಿ ಕರಡಿಗಳು ವಾಸವಾಗಿದ್ದು, ರಾತ್ರಿ ಸಮಯದಲ್ಲಿ ಹೊಲ-ಗದ್ದೆಗಳು ಮತ್ತು ತೋಟಗಳಿಗೆ ನುಗ್ಗಿ ಸಪೋಟ (ಚಿಕ್ಕು)ಹಣ್ಣು ಹಾಗೂ ಜೇನು ಪೆಟ್ಟಿಗೆಗಳಿಗೆ ಹಾನಿ ಮಾಡುತ್ತಿವೆ. ಕಳೆದ ವರ್ಷ ಇದೇ ಸಮಯದಲ್ಲಿ ಕಾಮನಹಳ್ಳಿ ಗ್ರಾಮದ ಮುತ್ತಣ್ಣ ಪೂಜಾರ ಎಂಬುವರ ತೋಟದಲ್ಲಿ ಎರಡು ಬಾರಿ ದಾಳಿ ನಡೆಸಿ, ಜೇನು ಪೆಟ್ಟಿಗೆಯಲ್ಲಿನ ಜೇನು ಕುಡಿದು ಪೆಟ್ಟಿಗೆ ನಾಶಪಡಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net