ಧರ್ಮ ಪಾಲನೆ ಜತೆಗೆ ರಕ್ಷಣೆಯೂ ಅಗತ್ಯ

new Balidan Diwas New
Published on

ಹುಬ್ಬಳ್ಳಿ : ಭಕ್ತಿ ಎಂದರೆ ಕೇವಲ ಪೂಜೆ ಮಾಡುವುದು ಅಲ್ಲ. ಧರ್ಮದ ಪಾಲನೆ ಜತೆಗೆ ರಕ್ಷಣೆಯನ್ನೂ ಮಾಡುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯ. ದೇವರ ಎದುರು ಎಲ್ಲರೂ ಸಮಾನರು. ದೇವರಿಗೆ ಸಮರ್ಪಿತಗೊಂಡವರಲ್ಲಿ ತ್ಯಾಗ, ಶೌರ್ಯದಂತಹ ಗುಣಗಳು ಇರುತ್ತವೆ ಎಂದು ಪ್ರಜ್ಞಾ ಪ್ರವಾಹ ಸಂಸ್ಥೆಯ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ ಹೇಳಿದರು.

ಇಲ್ಲಿನ ದೇಶಪಾಂಡೆ ನಗರದ ಗುರುದ್ವಾರದ ಶ್ರೀ ಗುರುಸಿಂಗ ಸಭಾದಲ್ಲಿ ಗುರು ನಾನಕ ಮಿಶನ್ ಟ್ರಸ್ಟ್ ಹಾಗೂ ಸದ್ಭಾವ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ‘ಬಲಿದಾನ ದಿವಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಔರಂಗಜೇಬ್ ಸೇರಿದಂತೆ ಅನೇಕರು ಮತಾಂತರಕ್ಕಾಗಿ ಹಿಂದುಗಳಿಗೆ ಸಾಕಷ್ಟು ಕಿರುಕುಳ ನೀಡಿದರು. ಆದರೆ, ಹಿಂದುಗಳು ಪ್ರಾಣ ಬಿಟ್ಟರೂ ಧರ್ಮ ಬಿಡಲಿಲ್ಲ. ಮುಸ್ಲಿಮ್ ರಾಜರ ಕಿರುಕುಳ ಹಿಂದುಗಳ ದೇಹಕ್ಕೆ ತಾಗಿತೇ ಹೊರತು, ಅಂತರಾತ್ಮಕ್ಕೆ ಅಲ್ಲ ಎಂದರು.

ಹಿಂದುಗಳ ರಕ್ಷಣೆಗಾಗಿ ಮುಸ್ಲಿಮ್ ದೊರೆಗಳ ವಿರುದ್ಧ ಹೋರಾಟ ನಡೆಸಿದವರಲ್ಲಿ ಗುರು ಗೋವಿಂದರ ಕುಟುಂಬದ ಹೋರಾಟ, ತ್ಯಾಗ ಸ್ಮರಣೀಯ. ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದುವಿನಲ್ಲಿ ಶಕ್ತಿ ತುಂಬಿದವರು ಗುರು ಗೋವಿಂದರು. ದೇಶಕ್ಕಾಗಿ ಕೆಲಸ ಮಾಡುವವರು ಗುರು ಗೋವಿಂದರಿಂದ ಕಲಿಯಬೇಕೆಂದು ಸ್ವತಃ ಸ್ವಾಮಿ ವಿವೇಕಾನಂದರು ಹೇಳಿದ್ದರು. ಹಿಂದು ಧರ್ಮದ ಎಲ್ಲ ಗುರುಗಳು ಧರ್ಮ ಪಾಲನೆ, ರಕ್ಷಣೆಗೆ ಸದಾ ನೇತೃತ್ವ ವಹಿಸಿದ್ದಾರೆ ಎಂದರು.

ಗುರು ಗೋವಿಂದರ ಪರಿವಾರದವರು ಹಿಂದು ಧರ್ಮಕ್ಕೆ ತಮ್ಮನ್ನು ತಾವು ಸಂಪೂರ್ಣವಾಗಿ ಮೀಸಲಿಟ್ಟಿದ್ದರು. ಧರ್ಮದಲ್ಲಿ ಸಮಸ್ಯೆ ಬಂದಾಗ ಅದನ್ನು ಸರಿಪಡಿಸುವ ಕಾರ್ಯವನ್ನು ಗುರುಗಳು ಸದಾ ಮಾಡುತ್ತ ಬಂದಿದ್ದಾರೆ. ಪ್ರತಿಯೊಬ್ಬರೂ ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ಗುರು ಗೋವಿಂದರ ಹೋರಾಟವನ್ನು ಸ್ಮರಿಸಬೇಕು. ನಿತ್ಯದ ಕೆಲಸದಲ್ಲಿಯೇ ದೇವರನ್ನು ಕಾಣಬೇಕು ಎಂದು ಸಲಹೆ ನೀಡಿದರು.

ಸದ್ಭಾವ ವೇದಿಕೆಯ ಸಂಯೋಜಕ ಮಹಾದೇವ ಕರಮರಿ ಮಾತನಾಡಿ, ಸಿಖ್ ಸಮುದಾದಯದವರು ಶೌರ್ಯದ ಸಂಕೇತ. ಸನಾತನ ಧರ್ಮದ ರಕ್ಷಣೆಗಾಗಿ ಸಿಖ್​ರು ಸದಾ ಸಿದ್ಧರಾಗಿರುತ್ತಾರೆ ಎಂದರು.

ಗುರು ಗೋವಿಂದರ ಪುತ್ರರು ಹಿಂದು ಧರ್ಮಕ್ಕಾಗಿ ಮಾಡಿದ ಬಲಿದಾನ ಸದಾ ಸ್ಮರಣೀಯ ಎಂದು ಸದ್ಭಾವ ವೇದಿಕೆ ಸಹ ಸಂಯೋಜಕ ಶಂಕ್ರಣ್ಣ ಮುನವಳ್ಳಿ ಹೇಳಿದರು.

ಗ್ಯಾನಿ ಗುರುವಂತಸಿಂಗ್ ಅವರಿಂದ ಇದೇ ಸಂದರ್ಭದಲ್ಲಿ ಕೀರ್ತನ ನೆರವೇರಿತು. ಟ್ರಸ್ಟ್ ಅಧ್ಯಕ್ಷ ಜಸಬೀರಸಿಂಗ್ ಗಿಲ್, ಉಪಾಧ್ಯಕ್ಷ ಪ್ರೀತಮಸಿಂಗ್ ಮಂಡಲ, ಹರಪಲ್ ಸಿಂಗ್, ಜಸವೀರಸಿಂಗ್ ಕೊನ್ಸಾಲ್, ಗಿರೀಶ ಧರೇರ್, ಸುಭಾಸಸಿಂಗ್ ಜಮಾದಾರ, ತೋಟಪ್ಪ ನಿಡಗುಂದಿ, ಮಹಾದೇವ ದಿವಟೆ, ಅಮೃತ ಪಟೇಲ, ಶ್ರೀಕಾಂತ ಕಲ್ಯಾಣಿ, ಭೀಮಣ್ಣ ಹವೇಲಿ, ದಿನೇಶ ವಾಘಮೋಡೆ, ಪರಶುರಾಮ ಊಟವಾಲೆ, ರಮೇಶ ಕದಮ, ವಿಜಯ ಕ್ಷೀರಸಾಗರ, ವಿವೇಕ ಮೊಖಾಶಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net