

ಶೃಂಗೇರಿ: ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ರಕ್ಷಣೆ ಹಾಗೂ ಮೌಲ್ಯಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು.
ಶನಿವಾರ ಶ್ರೀ ಶಾರದಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಅರ್ಥಿಕ ಸಬಲತೆಗೆ ಆಯೋಗ ನಿರಂತರ ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ-ಬೇಟಿ ಪಢಾವೋ ಯೋಜನೆ ರೂಪಿಸಿ ಮಹಿಳಾ ಉನ್ನತಿಗೆ ಆದ್ಯತೆ ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಪ್ರತಿ ಜಿಲ್ಲೆಯಲ್ಲೂ ಸಖಿ ಸಂಸ್ಥೆ ಆರಂಭಿಸಿದ್ದು, ಅವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿವೆ ಎಂದರು.
ಮಹಿಳೆಯರು ರಕ್ಷಣೆ ಕೋರಿ ಪೊಲೀಸ್ ಠಾಣೆಗಳಿಗೆ ತೆರಳಿದಾಗ ಇಲಾಖೆ ಅವರಿಗೆ ಸೂಕ್ತ ರಕ್ಷಣೆ ಕೊಡಬೇಕು. ಹೆಣ್ಣುಮಕ್ಕಳು ರಕ್ಷಣೆಗಾಗಿ ಸಖಿ ಸಂಸ್ಥೆಯನ್ನೂ ಸಂರ್ಪಸಬಹುದು. ಸಂಸ್ಥೆ ಕಾನೂನಿನ ಅರಿವು, ಪೋಲಿಸ್ ರಕ್ಷಣೆ, ಆರೋಗ್ಯ ಸಂರಕ್ಷಣೆ, ವಸತಿ ವ್ಯವಸ್ಥೆ ಮುಂತಾದ ನೆರವು ನೀಡುತ್ತಿದೆ. ಮಹಿಳಾ ದೌರ್ಜನ್ಯ ತಡೆಗೆ ಗ್ರಾಮ ಪಂಚಾಯಿತಿಗಳು ಕಾನೂನಿನ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.
ಶ್ರೀಮಠಕ್ಕೆ ಆಗಮಿಸಿದ ಶ್ಯಾಮಲಾ ಕುಂದರ್ ಅವರನ್ನು ಪಪಂ ಸದಸ್ಯೆ ಶ್ರೀವಿದ್ಯಾ ಸ್ವಾಗತಿಸಿದರು. ಪಪಂ ಅಧ್ಯಕ್ಷ ಹರೀಶ್.ವಿ.ಶೆಟ್ಟಿ ಸದಸ್ಯರಾದ ಎಚ್.ಎಸ್.ವೇಣುಗೋಪಾಲ್, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಸುಜಾತ.ಎನ್, ಪ.ಪಂ ಮಾಜಿ ಅಧ್ಯಕ್ಷೆ ಸುಮಾ ಸೋಮಶೇಖರ್, ಶಾರದಾಗೋಪಾಲ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ ರಾಘವೇಂದ್ರ, ಅಂಗನವಾಡಿ ಇಲಾಖೆ ಮೇಲ್ವಿಚಾರಕಿ ಸಾವಿತ್ರಿ, ಶಿಕ್ಷಕರಾದ ರಮಾದೇವಿ, ಸುಮನಾ ಇದ್ದರು.
ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಪುರಿಷರಿಗೆ ಸರಿ ಸಮನಾಗಿ ದುಡಿಯುತ್ತಿದ್ದಾಳೆ. ಆದರೆ ಅವಳ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ. ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಗ್ಗಟ್ಟಿನಿಂದ ಹೋರಾಟ ಮಾಡುವ ಅಗತ್ಯವಿದೆ
ಶ್ಯಾಮಲಾ ಕುಂದರ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ