

ಶೃಂಗೇರಿ: ವಿಶ್ವ ಹಿಂದು ಪರಿಷತ್ ಧರ್ಮದ ರಕ್ಷಣೆ ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ಹೊರತು ಅನ್ಯಮತೀಯರ ವಿರೋಧಕ್ಕಲ್ಲ ಎಂದು ವಿಎಚ್‌ಪಿ ಪ್ರಮುಖ್ ಸೂರ್ಯನಾರಾಯಣ ಹೇಳಿದರು.
ಕಿಗ್ಗಾದಲ್ಲಿ ತಾಲೂಕು ವಿಎಚ್‌ಪಿ ಏರ್ಪಡಿಸಿದ್ದ ಜಾರುಗಂಬ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿ, ಮನೆಯಲ್ಲಿಯೇ ಮಕ್ಕಳಿಗೆ ಸಂಸ್ಕಾರ ದೊರೆಯುವ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಧರ್ಮದ ಅರಿವು ಮೂಡಿಸಬೇಕು. ನಮ್ಮ ನೆರೆಹೊರೆ ದೇಶದಲ್ಲಿ ಹಿಂದುಗಳು ಅಲ್ಪ ಸಂಖ್ಯಾತರಾಗಿದ್ದು, ನಾವು ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ನಮಗಿರುವ ಸನಾತನ ಧರ್ಮ ನಮಗೆ ಎಲ್ಲ ಮೌಲ್ಯಗಳ ಅರಿವನ್ನು ನೀಡುವಲ್ಲಿ ಪೂರಕವಾಗಿದೆ. ಅದನ್ನು ನೀಡಿದ ಪವಿತ್ರ ನೆಲ ಭಾರತವಾಗಿದೆ ಎಂದರು.
ನಿವೃತ್ತ ಶಿಕ್ಷಕ ಕಿಗ್ಗಾ ಸುಬ್ಬಣ್ಣ ಮತ್ತು ಕೆರೆದಂಡೆ ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸುಷ್ಮಾ ಪ್ರಶಾಂತ್, ದ್ವಿತೀಯ ಸ್ಥಾನ ಪಡೆದ ಕುಸುಮಾ ಮಂಜುನಾಥ್ ಹಾಗೂ ಜಾರುಗಂಬ ಸ್ಪರ್ಧೆಯಲ್ಲಿ ಸತೀಶ್ ಹುಲಿಗರಡಿ ವಿಜೇತರಾದರು.
ಕೆ.ಸಿ.ನಟರಾಜರಾವ್, ಧಿವೀರ್ ಮಲ್ನಾಡ್, ಸುರೇಶ ಕುಮಾರ್, ಅಜಿತ್ ಕುಲಾಲ್, ಪ್ರಸಾದ್ ದೋಣೂರು, ಎಚ್.ಎಸ್.ಸುಬ್ರಹ್ಮಣ್ಯ, ಸುಬ್ರಹ್ಮಣ್ಯ ಆಚಾರ್ಯ ಇದ್ದರು.