ಕೈಗಾರಿಕೆಗಳಿಗೆ ಏಕಗವಾಕ್ಷಿ: ಉದ್ಯಮಿಗಳ ಹಿತ ಕಾಪಾಡಿ, ಡಾ.ವಿಜಯ ಸಂಕೇಶ್ವರ ಸಲಹೆ

Vijay Sankeshwar
Published on

ಹುಬ್ಬಳ್ಳಿ: ಕೈಗಾರಿಕೋದ್ಯಮಿಗಳು, ಬಂಡವಾಳ ಹೂಡಿಕೆ ದಾರರನ್ನು ಅಲೆದಾಡಿಸಬೇಡಿ. ಸಕಾಲಕ್ಕೆ ಕೆಲಸವಾಗದೆ ಅವರಿಗೆ ‘ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿದಂಥ’ ಕಹಿ ಅನುಭವಕ್ಕೆ ದಾರಿ ಮಾಡಿಕೊಡಬೇಡಿ. ಒಂದೇ ಕಡೆ ಎಲ್ಲ ಕೆಲಸ ಮಾಡಿಕೊಡಲು ಏಕ ಗವಾಕ್ಷಿ ಪದ್ಧತಿ ಜಾರಿಗೆ ತನ್ನಿ...

ಹೀಗೆ ಸರ್ಕಾರಕ್ಕೆ ಸಲಹೆ ನೀಡಿದವರು ಹಿರಿಯ ಉದ್ಯಮಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ. ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಹೂಡಿಕೆದಾರರ ಸಮಾವೇಶದ ಸಂಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಉದ್ಯಮಿಗಳ ಅಪೇಕ್ಷೆಯನ್ನು ತಮ್ಮದೇ ಅನುಭವದ ರೀತಿಯಲ್ಲಿ ಹೇಳಿದರು. ಹೂಡಿಕೆ ಸಮಾವೇಶವನ್ನು ಚೆನ್ನಾಗಿ ಸಂಯೋಜಿಸಲಾಗಿದೆ. ಇದರ ನಂತರದ ಕೆಲಸವೇ ಮಹತ್ವದ್ದಾಗಿದೆ. ಇದಕ್ಕಾಗಿ ‘ಸಿಂಗಲ್ ವಿಂಡೋ’ ವ್ಯವಸ್ಥೆಯನ್ನು ಶೀಘ್ರವಾಗಿ ಆರಂಭಿಸಬೇಕು ಎಂದರು.

ದೇಶವನ್ನು ರಾಜಕಾರಣಿಗಳು ನಡೆಸುತ್ತಿಲ್ಲ; ಅಧಿಕಾರಿಗಳೇ ಮುನ್ನಡೆಸುವವರು. ನಾವು ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವೇದಿಕೆ ಎಂಬ ಸಂಘಟನೆ ಆರಂಭಿಸಿ, ಅಧ್ಯಯನಕ್ಕಾಗಿ ಗುಜರಾತಿಗೆ ಹೋದಾಗ ಅಲ್ಲಿಯ ಅಧಿಕಾರಿಗಳು ಸ್ಪಂದಿಸುವ ರೀತಿಯನ್ನು ನೋಡಿದ್ದೇವೆ. ತನ್ನ ಸರ್ಕಾರ ಎಂದು ಭಾವಿಸಿಕೊಂಡು, ಉದ್ಯಮಿಗಳ ಕೆಲಸವನ್ನು ತನ್ನದೇ ಕೆಲಸ ಎಂಬಂತೆ ಕಾಳಜಿಯಿಂದ ತ್ವರಿತವಾಗಿ ಮಾಡಿಕೊಡುತ್ತಾರೆ. ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟ ತರಬೇತಿ ಹಾಗೆ ಇದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ಅಧಿಕಾರಿಗಳು ಅತ್ಯಂತ ಚುರುಕಿನಿಂದ ಕೆಲಸ ಮಾಡಬೇಕು. ಮುಖ್ಯಮಂತ್ರಿಯವರು ಅಂಥ ತರಬೇತಿ ಒದಗಿಸಬೇಕು ಎಂದು ಕೋರಿದರು.

ಉ.ಕ. ಪ್ರಶಸ್ತ ತಾಣ: ಹುಬ್ಬಳ್ಳಿ, ಉತ್ತರ ಕರ್ನಾಟಕ ಕೈಗಾರಿಕೆ ಸ್ಥಾಪನೆಗೆ ಪ್ರಶಸ್ತ ತಾಣ. 1942ರಲ್ಲೇ ಬ್ರಿಟಿಷರು ಹುಬ್ಬಳ್ಳಿಯನ್ನು ಗುರುತಿಸಿ, ಇಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ 3500 ಎಕರೆ ಜಾಗ ಗುರುತಿಸಿದ್ದರು. ಹುಬ್ಬಳ್ಳಿಯ ರೈಲ್ವೆ ವರ್ಕ್​ಶಾಪ್ 150 ವರ್ಷ ಹಿಂದೆಯೇ ಸ್ಥಾಪನೆಯಾಗಿದ್ದು. ಈಗ ರೈಲ್ವೆ ರಾಜ್ಯ ಸಚಿವರಾಗಿರುವ ಸುರೇಶ ಅಂಗಡಿ ಅವರು ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ಏನೋ ಅದ್ಭುತವನ್ನು ಸೃಷ್ಟಿಸಲಿದ್ದಾರೆಂಬ ವಿಶ್ವಾಸ ಇದೆ ಎಂದರು.

ಉತ್ತರ ಕರ್ನಾಟಕದಲ್ಲಿ ಒಳ್ಳೆಯ ಕೆಲಸಗಾರರು, ಪ್ರತಿಭಾವಂತರು ಇದ್ದಾರೆ. ಇಲ್ಲಿಯ ಮಣ್ಣಿನ ಗುಣ ಹಾಗೆ ಇದೆ. ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ, ಈಗಿನ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಡಾ. ಗುರುರಾಜ ದೇಶಪಾಂಡೆ, ಸುಧಾ ಮೂರ್ತಿ ಸೇರಿ ಅನೇಕರ ಉದಾಹರಣೆ ನೀಡಬಹುದು. ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ ಕನ್ನಡಿಗರಲ್ಲಿ ಉತ್ತರ ಕರ್ನಾಟಕದವರೇ ಜಾಸ್ತಿ ಇದ್ದಾರೆ ಎಂದು ಹೇಳಿದರು.

ಮೂಲಸೌಕರ್ಯಗಳ ಕುರಿತಾಗಿಯೂ ಉದ್ಯಮಿಗಳು ಚಿಂತಿಸಬೇಕಾಗಿಲ್ಲ. ವಿಮಾನ ನಿಲ್ದಾಣ, ರಸ್ತೆಗಳು ಸೇರಿ ಎಲ್ಲವೂ ಅಭಿವೃದ್ಧಿಯಾಗಿವೆ. ಹುಬ್ಬಳ್ಳಿ ನಗರದಲ್ಲಿ ಐದು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ಹುಬ್ಬಳ್ಳಿಯನ್ನೇ ಕೇಂದ್ರವಾಗಿಸಿಕೊಂಡಿರುವುದು ವಿಆರ್​ಎಲ್ ಯಶಸ್ಸಿಗೆ ಪ್ರಮುಖ ಕಾರಣ. ಒಂದು ಲಾರಿ ಖರೀದಿಸಿ ನಾನೇ ಚಾಲನೆ ಮಾಡುತ್ತಿದ್ದೆ. ವಿಆರ್​ಎಲ್ ಇಂದು 5 ಸಾವಿರ ಲಾರಿಗಳನ್ನು ಹೊಂದಿ ದೇಶದ ನಂ.1 ಲಾಜಿಸ್ಟಿಕ್ ಸಂಸ್ಥೆಯಾಗಿ ಬೆಳೆದಿದೆ. ನಮ್ಮ ಪ್ರತಿಸ್ಪರ್ಧಿಗಳು ದೆಹಲಿ, ಮುಂಬೈನಂಥ ನಗರಗಳನ್ನು ಕೇಂದ್ರಸ್ಥಾನವಾಗಿ ಮಾಡಿಕೊಂಡಿದ್ದಾರೆ. ಅಲ್ಲಿ ಖರ್ಚು-ವೆಚ್ಚಗಳು ಹೆಚ್ಚು. ಸ್ಥಳೀಯ ಉದ್ಯೋಗಿಗಳೇ ಸಿಗುವುದಿಲ್ಲ. ವಿಆರ್​ಎಲ್ ಸಂಸ್ಥೆಯ 20 ಸಾವಿರ ಉದ್ಯೋಗಿಗಳಲ್ಲಿ ಬಹುತೇಕರು ಉತ್ತರ ಕರ್ನಾಟಕದವರೇ ಇದ್ದಾರೆ. ಹೊರ ರಾಜ್ಯದಲ್ಲಿಯ ಕಚೇರಿಗಳಲ್ಲೂ ಕನ್ನಡಿಗರೇ ಇದ್ದಾರೆ. ಎಷ್ಟರಮಟ್ಟಿಗೆ ಎಂದರೆ, ನಮ್ಮ ಸಂಸ್ಥೆಗೆ ಸಂಬಂಧಿಸಿದ ಸಭೆಗಳು ಕನ್ನಡದಲ್ಲೇ ನಡೆಯುತ್ತವೆ ಎಂದ ಡಾ.ಸಂಕೇಶ್ವರ ಅವರು, ಈ ಭಾಗದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಧೈರ್ಯದಿಂದ ಮುಂದೆ ಬರಬಹುದು ಎಂದು ಮನವರಿಕೆ ಮಾಡಿದರು.

ಹಿಂದಿನ 20 ವರ್ಷಗಳಲ್ಲಿ ದೇಶಕ್ಕೆ ಹರಿದು ಬಂದ ವಿದೇಶಿ ನೇರ ಬಂಡವಾಳ(ಎಫ್​ಡಿಐ) ದ ಶೇ.50 ಹಣ ಕಳೆದ 5 ವರ್ಷಗಳಲ್ಲಿ ಹರಿದು ಬಂದಿದೆ. ಕೇಂದ್ರ ಸರ್ಕಾರ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ದ್ವಿತೀಯ ಹಾಗೂ ತೃತೀಯ ಸ್ತರದ ನಗರಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಯಾದರೆ ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್​ಗೆ ಮುಟ್ಟಲಿದೆ. | ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net