ದೇಶದ ಅಖಂಡತೆ ಕಾಯ್ದುಕೊಳ್ಳಲು ಸಂವಿಧಾನದ ರಕ್ಷಣೆ: ಸಚಿವ ಡಾ. ಎಚ್.ಸಿ. ಮಹದೇವಪ್ಪ

gkvk ambedkar
Published on

ಬೆಂಗಳೂರು: ದೇಶದ ಅಖಂಡತೆ ಕಾಯ್ದುಕೊಳ್ಳುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿರುವ ಸಂವಿಧಾನ ಪ್ರಮುಖ ಪಾತ್ರ ವಹಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಎಚ್.ಸಿ ಮಹದೇವಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯಲ್ಲಿ ವಿವಿಯ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಸಂಘ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 134ನೇ ಜಯಂತಿ ‘ಭೀಮೋತ್ಸವ-2025’ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿಯೇ ಅತಿ ದೊಡ್ಡ ಲಿಖಿತ ಸಂವಿಧಾನ ನಮ್ಮದು. 140 ಕೋಟಿ ಜನರ ಬದುಕನ್ನು ನಿಯಂತ್ರಿಸುವ ಹಾಗೂ ರಕ್ಷಿಸುವ ಶಕ್ತಿ ನಮ್ಮ ಸಂವಿಧಾನಕ್ಕೆ ಇದೆ. ಕೃಷಿಕರು, ಕಾರ್ಮಿಕರ ಹಕ್ಕುಗಳು, ನೀರಾವರಿ ಯೋಜನೆ ರೂಪಿಸುವಲ್ಲಿ ಡಾ. ಅಂಬೇಡ್ಕರ್ ಪಾತ್ರ ಶ್ಲಾಘನೀಯ ಎಂದರು.

ಡಾ. ಅಂಬೇಡ್ಕರ್ ಒಬ್ಬ ಆರ್ಥಿಕ ತಜ್ಞರಾಗಿದ್ದರು. ಅಂದಿನ ದಿನದಲ್ಲಿಯೇ ಅಧಿಕಾರ ವಿಕೇಂದ್ರೀಕರಣದಿಂದ ಮಾತ್ರ ಸಾಮಾಜಿಕ ಆರ್ಥಿಕ ಬದಲಾವಣೆ ಸಾಧ್ಯ ಹಾಗೂ ಪಂಚಾಯತಿಗಳು ಸಂವಿಧಾನದ ಭಾಗ ಎಂದು ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ. ರಾಜ್ಯದ ಮೊದಲ ಕೃಷಿ ವಿವಿ ಖ್ಯಾತಿಯ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ ಕಟ್ಟಡ ಹಾಗೂ ಅಂಬೇಡ್ಕರ್ ಅಧ್ಯಯನ ಪೀಠವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಶಸ್ತಿ ಪ್ರದಾನ:

ಇದೇ ವೇಳೆ ಸಚಿವರು ರಂಗಭೂಮಿ ಕಲಾವಿದ ಕೆ.ಸಿ.ಲಕ್ಷಣ್ ಅವರಿಗೆ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಕೆಪಿಎಸ್‌ಸಿ ಸದಸ್ಯ ಡಾ. ವಿ.ದೇವಪ್ಪ, ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ ಉಲ್ಲಾಸ್ ಮತ್ತು ಡಾ. ಎಂ. ಚಂದ್ರೇಗೌಡ ಹಾಗೂ ಕೃಷಿ ವಿವಿಯ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಘಟಕದ ನಿರ್ದೇಶಕ ಡಾ. ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.

ರಿಸರ್ವ್ ಬ್ಯಾಂಕ್ ಆಫ್​​ ಇಂಡಿಯಾ (ಆರ್‌ಬಿಐ) ಸ್ಥಾಪನೆಯ ಪೀಠಿಕೆ ಮತ್ತು ರೈತರಿಗೆ ಸಾಲ ನೀಡಲು ಡಾ. ಅಂಬೇಡ್ಕರ್ ಅಂದೇ ಶಿಫಾರಸು ಮಾಡಿದ್ದರು. ಕೊಲಂಬಿಯಾ ವಿವಿ ಮತ್ತು ಲಂಡನ್ ಸ್ಕೂಲ್ ಆಫ್​ಎಕನಾಮಿಕ್ಸ್‌ನಿಂದ ಡಾಕ್ಟರೇಟ್ ಪಡೆದ ಮೊದಲ ಭಾರತೀಯ. ಮಹಿಳೆಯರ ಹಕ್ಕಿಗಾಗಿ 1951ರಲ್ಲಿ ಹಿಂದು ಕೋಡ್ ಬಿಲ್ ಮಂಡನೆಗೆ ಪ್ರಯತ್ನಿಸಿದ್ದರು.

- ಡಾ. ಎಸ್.ವಿ. ಸುರೇಶ್, ಬೆಂಗಳೂರು ಕೃಷಿ ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net