

ಮೈಸೂರು: ದೇಶ ಕಟ್ಟುವುದು ಹೇಗೆ ಎಂಬುದನ್ನು ಸಂವಿಧಾನ ತಿಳಿಸಿದೆ. ಹೀಗಾಗಿ ಸಂವಿಧಾನ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಸಂವಿಧಾನ ರಕ್ಷಣೆ ಮಾಡಿದರೆ ಸಂವಿಧಾನ ನಮ್ಮನ್ನು ರಕ್ಷಣೆ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದ ಜೆ.ಕೆ.ಮೈದಾನದ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಗಳಿಗೆ ಟೂಲ್ ಕಿಟ್ ವಿತರಣೆ, ಮಾಹಿತಿ ಶಿಕ್ಷಣ ಸಂವಹನ ಜಾಗೃತಿ ಮತ್ತು ಪ್ರಚಾರ ಚಟುವಟಿಕೆ, ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯ ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.
ಮೊದಲೆಲ್ಲಾ ಅಂಬೇಡ್ಕರ್ ಎಂದರೆ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಾತ್ರ ಎಂಬ ಪೂರ್ವಗ್ರಹ ಮನಸ್ಥಿತಿ ಇತ್ತು. ಆದರೆ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸ್ವಾಭಿಮಾನದ ಬದುಕನ್ನು ನೀಡಿದೆ. ಈ ಕಾರಣಕ್ಕೆ ಇವತ್ತು ಪ್ರತಿಯೊಬ್ಬರು ಸಂವಿಧಾನಕ್ಕೆ ಗೌರವ ಕೊಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕನ್ನು ಕಲ್ಪಿಸಿರುವ ಸಂವಿಧಾನವನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.
ಕಾರ್ಮಿಕರ ರಕ್ಷಣೆ ಸರ್ಕಾರದ ಜವಾಬ್ದಾರಿ. ಅಂತಹ ಭದ್ರತೆ ಒದಗಿಸಬೇಕು ಎಂದು ಸಂವಿಧಾನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಕಾರ್ಮಿಕರಿಗೆ ವೇತನ ನಿಗದಿ, ಆರೋಗ್ಯ ಸೇವೆ, ಕಲ್ಯಾಣ ಕಾರ್ಯಕ್ರಮಗಳನ್ನು ನೀಡಲಾಗಿದೆ ಎಂದು ಹೇಳಿದರು.
ಮೈಸೂರಿನ ನಿರ್ಮಾಣದಲ್ಲಿ ಕಟ್ಟಡ ಕಾರ್ಮಿಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರತಿನಿತ್ಯ ದುಡಿದ ಹಣದಲ್ಲಿ ಜೀವನ ನಡೆಸಬೇಕು. ಹೀಗಾಗಿ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಕೊಡಿಸುವುದು ಬಹಳ ಕಷ್ಟವಾಗಲಿದೆ. ಅದರಲ್ಲಿಯೂ ಕೊರೊನಾ ಸಂದರ್ಭದಲ್ಲಿ ಬಹಳ ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಕಾರ್ಮಿಕರನ್ನು ಸಂಕಷ್ಟದಿಂದ ಪಾರು ಮಾಡಿತು ಎಂದರು.
ಕಾರ್ಮಿಕ ಸಚಿವ ಸಂತೋಷ್‌ಲಾಡ್ ಅವರು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಕಾಳಜಿ ವಹಿಸಿ ಸಚಿವ ಸಂಪುಟದಲ್ಲಿ ಅನೇಕ ಯೋಜನೆಗಳಿಗೆ ಅನುಮೋದನೆ ದೊರೆಕಿಸಿದ್ದಾರೆ. ಆರೋಗ್ಯ, ಮಕ್ಕಳ ಶಿಕ್ಷಣ, ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. ಹೀಗಾಗಿ ಪ್ರತಿಯೊಬ್ಬ ಕಾರ್ಮಿಕರು ಕಡ್ಡಾಯವಾಗಿ ನೋಂದಣಿ ಆಗಬೇಕು ಎಂದರು.
ಕಾರ್ಮಿಕ ಇಲಾಖೆ ಅಪರ ಕಾರ್ಮಿಕ ಆಯುಕ್ತ ಎಸ್.ಟಿ.ರವಿಕುಮಾರ್ ಮಾತನಾಡಿ, ಪ್ರತ್ಯೇಕ ಕಟ್ಟಡ ಕಾರ್ಮಿಕರ ಮಂಡಳಿಯಿಂದ ಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ನೀಡಲಾಗುತ್ತಿದೆ. ಮೈಸೂರಿನಲ್ಲಿ 50 ಸಾವಿರ ಜನರಿಗೆ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಸರ್ಕಾರದ ಕಾರ್ಮಿಕ ಸಚಿವ ಸಂತೋಷ ಲಾಡ್ ಅಸಂಘಟಿತ ಕಾರ್ಮಿಕರಿಗೆ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪತ್ರಿಕಾ ವಿತರಕರಿಗೆ ವಿಮಾ ಸೌಲಭ್ಯ, ಸಿನಿಮಾ, ಸಾಂಸ್ಕೃತಿಕ ರಂಗದ ಕಾರ್ಮಿಕರಿಗೆ ಸೌಲಭ್ಯ ನೀಡಲು ಸಿದ್ಧತೆ ನಡೆದಿದೆ. ಸಾರಿಗೆ ಕೆಲಸಗಾರರಿಗೆ ಕಾಯ್ದೆ ರೂಪಿಸಿ ಪ್ರತ್ಯೇಕ ಮಂಡಳಿ ರಚಿಸಲಾಗಿದೆ. ಆಶಾ ಯೋಜನೆ ಜಾರಿಗೆ ತರಲಾಗಿದೆ. ಇವುಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಆರ್.ವೀಣಾ, ಪ್ರಚಾರ ಮತ್ತು ಅಂಕಿ ಅಂಶ ಇಲಾಖೆ ಉಪ ಆಯುಕ್ತ ಡಿ.ಜಿ.ನಾಗೇಶ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ಮಾದಪ್ಪ, ಜಯಣ್ಣ, ಮಂಗಳ ಗೌರಮ್ಮ, ಲಕ್ಷ್ಮೀಶ್, ಎನ್.ಮಂಜುನಾಥ್, ಅಂಬಿಕಾ ಇತರರಿದ್ದರು.