ಸಂವಿಧಾನ ರಕ್ಷಣೆ ಎಲ್ಲರ ಜವಾಬ್ದಾರಿ

Congress Constitution Campaign
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ರಕ್ಷಕ್ ಅಭಿಯಾನವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಬಲ್ಕಿಷ್ ಬಾನು, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಎಸ್.ರವಿಕುಮಾರ್, ಇಕ್ಕೇರಿ ರಮೇಶ್, ಶಿವಣ್ಣ, ಕೆ.ಆರ್.ಶ್ರೀಧರ್, ಎಚ್.ಸಿ.ಯೋಗೇಶ್, ಡಾ. ಶ್ರೀನಿವಾಸ್ ಕರಿಯಣ್ಣ, ವಿಜಯಕುಮಾರ್ ಸಂತೆಕಡೂರು, ಶಿವಕುಮಾರ್, ಜಿ.ಡಿ.ಮಂಜುನಾಥ, ನಾಗರಾಜ್ ಕಂಕಾರಿ ಇದ್ದರು.
Published on

ಶಿವಮೊಗ್ಗ: ಸಂವಿಧಾನದ ಪುಸ್ತಕ ಹಿಡಿಯುವುದು ಶೋಕಿಯಲ್ಲ. ಸಂವಿಧಾನ ನಮ್ಮ ಹೆಮ್ಮೆ. ಅದನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಅಂಬೇಡ್ಕರ್ ಭವನದಲ್ಲಿ ಶನಿವಾರ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗ, ಪರಿಶಿಷ್ಟ ಜಾತಿ ವಿಭಾಗ, ಪರಿಶಿಷ್ಟ ಪಂಗಡ ವಿಭಾಗ, ಅಲ್ಪಸಂಖ್ಯಾತರ ವಿಭಾಗಗಳಿಂದ ಸಂವಿಧಾನ ರಕ್ಷಕ್ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನದ ಪುಸ್ತಕ ಹಿಡಿಯುವುದರ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಸಂವಿಧಾನದ ಕೈಪಿಡಿಯನ್ನು ಶೋಕಿಗಾಗಿ ಹಿಡಿಯುತ್ತಿಲ್ಲ. ವಾಸ್ತವವಾಗಿ ಸಂವಿಧಾನದ ಆಶಯಗಳನ್ನು ಪಾಲನೆ ಮಾಡುತ್ತಿದ್ದಾರೆ ಎಂದರು.

ದೇಶಕ್ಕೆ ಸ್ವಾತಂತ್ರ ಸಿಕ್ಕಿದೆ. ಸಂವಿಧಾನವೂ ರಚನೆಯಾಗಿದೆ. ಆದರೆ ನಮ್ಮ ಸಂವಿಧಾನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವುದು ವಿಪರ್ಯಾಸ. ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯನ್ನು ಪೂಜಿಸುವ ಈ ಹೊತ್ತಿನಲ್ಲಿ ಅಂಬೇಡ್ಕರ್ ಮರೆಯಾಗುತ್ತಿದ್ದಾರೆ. ನಮ್ಮ ತಂದೆ-ತಾಯಿ, ಗುರು ಎಲ್ಲ ಸ್ಥಾನದಲ್ಲಿರುವ ಸಂವಿಧಾನವನ್ನೇ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಹಾಗಾಗಿ ಪವಿತ್ರ ಸಂವಿಧಾನವನ್ನು ಅಪವಿತ್ರಗೊಳಿಸುವ ಮೊದಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ ರಾಜ್ಯದೆಲ್ಲೆಡೆ ಸಂವಿಧಾನ ರಕ್ಷಕ್ ಅಭಿಯಾನ ಹಮ್ಮಿಕೊಂಡಿದೆ ಎಂದರು.

ಪಠ್ಯಪುಸ್ತಕಗಳಲ್ಲಿ ಕೇಸರಿಕರಣವಾಗಿದ್ದನ್ನು ನಾನು ಸಚಿವನಾದ ತಕ್ಷಣ ತೆಗೆದು ಹಾಕಿದ್ದೇನೆ. ಶಾಲಾ ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದ್ದೇನೆ. ಹಲವು ಶಾಲೆಗಳು ಇದನ್ನು ಪಾಲಿಸುತ್ತಿವೆ. ಸಂವಿಧಾನದ ಪ್ರಕಾರ ನಾವೆಲ್ಲರೂ ಒಂದೇ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದರು.

ಶಿವಪ್ಪ ನಾಯಕ ವೃತ್ತದಿಂದ ಮೆರವಣಿಗೆ

ಮಹಾತ್ಮ ಗಾಂಧಿ ಪಾರ್ಕ್ ಗಾಂಧಿ ಪ್ರತಿಮೆ, ಪಾಲಿಕೆ ಆವರಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶಿವಪ್ಪ ನಾಯಕ ವೃತ್ತ, ಎ.ಎ.ವೃತ್ತ, ಟಿ.ಸೀನಪ್ಪ ಶೆಟ್ಟಿ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ಭವನದವರೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net