

ಬೆಂಗಳೂರು: ನದಿ ಮತ್ತು ಮಳೆ ಜೀವನದ ತೊಟ್ಟಿಲು. ಕುಂದುತ್ತಿರುವ ನೀರಿನ ಸಂಪನ್ಮೂಲ, ಕಣ್ಮರೆಯಾಗುತ್ತಿರುವ ಹಸಿರು ಹೊದಿಕೆ ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ದಿ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.
ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸುವರ್ಣಮುಖಿ ನದಿ ಪುನರುಜ್ಜೀವನ’ ಕಾರ್ಯಾಗಾರದಲ್ಲಿ ಮಾತನಾಡಿದರು.
ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕ್ಷೀಣವಾಗುತ್ತಿದೆ. ಸರೋವರಗಳು ಕಣ್ಮರೆಯಾಗುತ್ತಿವೆ. ಕಾವೇರಿ ನದಿ ಮೇಲೆ ಹೆಚ್ಚು ಅವಲಂಬನೆದಿಂದ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ತಲೆದೋರಿದೆ. ನದಿಗಳ ನೀರನ್ನು ನಮ್ಮನ್ನು ಶುದ್ಧೀ ಮಾಡಿಕೊಳ್ಳಲು ಬಳಸುತ್ತೇವೆ. ಆದರೆ, ಇಂದು ಅದೇ ನದಿಗಳನ್ನು ಶುದ್ಧೀಕರಿಸಬೇಕಾಗಿರುವ ಪರಿಸ್ಥಿತಿಗೆ ತಲುಪಿದೆ. ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಆರ್ಟ್ ಆಫ್ ಲಿವಿಂಗ್ ನೀರು ರಕ್ಷಿಸುವ ಬಗ್ಗೆ ಗಮನ ಹರಿಸಿದೆ. ನೈಸರ್ಗಿಕ ಜಲ ಮರುಪೂರಣ ಪುನಃ ಸ್ಥಾಪಿಸಲು, ಪ್ರಕೃತಿ ಆಧಾರಿತ ವಿಧಾನದಿಂದ ಮಾಲಿನ್ಯ ನಿಭಾಯಿಸುವುದು ಮತ್ತು ದೀರ್ಘ ಅವಧಿವರೆಗೆ ನೀರಿನ ಸಂರಕ್ಷತೆಗಾಗಿ ಸಮುದಾಯಗಳನ್ನು ಸಜ್ಜುಗೊಳಿಸಬೇಕಿದೆ ಎಂದು ಹೇಳಿದರು.
ನಮ್ಮ ಸಂಸ್ಥೆಯು ಸುವರ್ಣಮುಖಿ ನದಿ ಪುನರುಜ್ಜೀವನ ಯೋಜನೆಯಡಿ ನದಿಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಅಂತರ್ಜಲ ಪುನಃ ಸ್ಥಾಪಿಸುತ್ತಿದೆ. 2013ರಿಂದ ದೇಶಾದ್ಯಂತ 70ಕ್ಕೂ ಅಧಿಕ ನದಿ ಮತ್ತು ಹೊಳೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ. 3.5 ಕೋಟಿ ಜನರಿಗೆ ಅನುಕೂಲವಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಶ್ ಚಂದ್ರ ರೇ, ಐಐಎಂ ಬೆಂಗಳೂರು ಡಾ. ಗೋಪಾಲ್ ನಾಯಕ್, ಪಂಜಾಬ್‌ನ ಜಲ ಸಂರಕ್ಷಣಾವಾದಿ ಡಾ. ಜಗಜೀತ್ ಸಿಂಗ್ ಕೊಚಾರ್ ಮತ್ತಿತರರಿದ್ದರು.
ಅಂತರ್ಜಲ ಮಟ್ಟ ಹೆಚ್ಚಿಸಲು ಯೋಜನೆ:
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಮಾತನಾಡಿ, ಆರ್ಥಿಕ ಬೆಳವಣಿಗೆಗೆ ನಗರ ವಿಸ್ತರಣೆ ಅಗತ್ಯವಿದೆ. ಇದರಿಂದ ಅಂತರ್ಜಲ ಮಟ್ಟ ತಗ್ಗಲಿದೆ. ಈ ಸಮಸ್ಯೆ ನೀಗಿಸಲು ಸರ್ಕಾರ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಹೆಸರಿನಲ್ಲಿ ಸರ್ಕಾರಗಳು ಪ್ರಕೃತಿಯನ್ನು ನಾಶಪಡಿಸುತ್ತಿದೆ. ಮಾಲಿನ್ಯಕಾರಕ ತೊಡೆದುಹಾಕಲು, ಅಂತರ್ಜಲ ಮರು ಪೂರಣಗೊಳಿಸಲು ನೈಸರ್ಗಿಕ ಸುಸ್ಥಿರತೆ ಪರಿಹಾರ ಅಳವಡಿಸಿಕೊಳ್ಳುವ ಅಗತ್ಯವಿದೆ.
- ಡಾ. ವೈ. ಲಿಂಗರಾಜು, ಭೂವಿಜ್ಞಾನಿ