ನೆಲ, ಜಲ, ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

byn (1)
Published on

ಬೈಂದೂರು: ಬೈಂದೂರು ತಾಲೂಕು ಆಡಳಿತ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ಶುಕ್ರವಾರ ಸ್ವಾತಂತ್ರೊೃೀತ್ಸವ ಆಚರಿಸಲಾಯಿತು. ತಹಸೀಲ್ದಾರ್ ಎಚ್.ರಾಮಚಂದ್ರಪ್ಪ ಧ್ವಜಾರೋಹಣ ಮಾಡಿ ಮಾತನಾಡಿ, ಈ ನೆಲದ ಕಾನೂನು, ಸಂವಿಧಾನಕ್ಕೆ ಗೌರವ ನೀಡುವ ಜತೆಗೆ ಸ್ವತಂತ್ರ ಭಾರತದ ಅಭಿವೃದ್ಧಿ ಕನಸಿಗೆ ನಾವೆಲ್ಲ ಜೊತೆಯಾಗುವುದೇ ಸ್ವಾತಂತ್ರ್ಯ ಸಂಭ್ರಮದ ನಿಜಾರ್ಥ. ಈ ನೆಲ, ಜಲ, ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಜವಬ್ದಾರಿ ಎಂದರು.

ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಸ್ವಾತಂತ್ರ್ಯ ಎನ್ನುವುದು ಈ ದೇಶದ ಹಲವು ಮಹಾನ್ ನಾಯಕರ ತ್ಯಾಗ ಬಲಿದಾನ ಹೋರಾಟದ ಫಲವಾಗಿದೆ. ನನ್ನ ನೆಲ ನನ್ನ ಊರು ನಮ್ಮ ಜನ ಎನ್ನುವ ಭಾವನೆ ಮೂಡಿದಾಗ ದೇಶ ಅಭಿವೃದ್ಧಿಯ ಚಿಂತನೆ ಮೂಡುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಬೈಂದೂರು ತಾಪಂ ಕಾರ್ಯನಿರ್ವಹಕ ಅಧಿಕಾರಿ ರಾಜ್‌ಕುಮಾರ್, ವೃತ್ತ ನಿರೀಕ್ಷಕ ಸವಿತ್ರ ತೇಜ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ, ಕಂದಾಯ ಇಲಾಖೆ ಸಿಬ್ಬಂದಿ, ಆರಕ್ಷಕ ಠಾಣೆಯ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

ನಿವೃತ್ತ ಯೋಧ ರಾಘವ ಖಾರ್ವಿ, ಪೌರ ಕಾರ್ಮಿಕರಾದ ಕಮಲಾ ಹಾಗೂ ಉದಯಕುಮಾರ್ ಶೆಟ್ಟಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಾನ್ಯಾ ಅವರನ್ನು ಸನ್ಮಾನಿಸಲಾಯಿತು. ನಂತರ ಆರಕ್ಷಕ, ಅಗ್ನಿಶಾಮಕ ದಳ ಹಾಗೂ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ.ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಣಪತಿ ಹೋಬಳಿದಾರ್ ನಿರೂಪಿಸಿದರು. ಬೈಂದೂರು ಪ.ಪಂ. ಅಧಿಕಾರಿ ಅಜಯ್ ಭಂಡಾರ್ಕಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net