ಸಾರ್ವಜನಿಕ ಉದ್ದೇಶಕ್ಕೆ ಜಾಗ ಮೀಸಲಿಡಿ

19 ckm 14
Published on

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಅರಣ್ಯ ವ್ಯಾಪ್ತಿಯ ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ, ಸ್ಮಶಾನ, ದೇವಸ್ಥಾನ, ಆಶ್ರಯ ಮನೆಗಳು ಒಳಗೊಂಡಂತೆ ಇತರ ಸಾರ್ವಜನಿಕ ಉದ್ದೇಶಕ್ಕಾಗಿ ಅಗತ್ಯ ಜಾಗ ಮೀಸಲಿರಿಸುವಂತೆ ಜಿಲ್ಲಾಧಿಕಾರಿ ಡಾ. ಎಸ್.ಬಗಾದಿ ಗೌತಮ್ ಅವರು ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶ ಘೊಷಣೆ ಸಂಬಂಧ ಕುರಿತ ಅರಣ್ಯಾಧಿಕಾರಿಗಳನ್ನು ಒಳಗೊಂಡ ಸಭೆಯಲ್ಲಿ ಮಾತನಾಡಿದರು.

ಗಿರಿ ವ್ಯಾಪ್ತಿಯ ತೊಗರಿಹಂಕಲ್, ತಳಿಹಳ್ಳ, ಐ.ಡಿ.ಪೀಠ, ಹಿರೇಕೊಳಲೆ, ಮೇಲು ಹುಲುವತ್ತಿ, ಮಲ್ಲೇನಹಳ್ಳಿ, ಅಲ್ಲಂಪುರ, ದಾಸರಹಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುವ 22 ಗ್ರಾಮಗಳು ಸೇರಿ ಈ ಸಂರಕ್ಷಿತ ಮೀಸಲು ಅರಣ್ಯದ 16845.34 ಹೆಕ್ಟೇರ್ ಪ್ರದೇಶವನ್ನು ಪ್ರಸ್ತಾಪಿತ ಪ್ರದೇಶವಾಗಿ ಗುರುತಿಸಲಾಗಿದೆ ಎಂದರು.

ಅಭಿವೃದ್ಧಿ ಕಾರ್ಯಕ್ಕೆ ನಿರ್ಬಂಧವಿಲ್ಲ: ಜೀವ ವೈವಿಧ್ಯತೆ ಹೊಂದಿರುವ ವನ್ಯಜೀವಿಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ ಜಿಲ್ಲೆಯ ಮುಳ್ಳಯ್ಯನಗಿರಿ ಶ್ರೇಣಿ ಸುತ್ತಮುತ್ತಲಿನ 22 ಗ್ರಾಮಗಳನ್ನು ಮೀಸಲು ಪ್ರದೇಶವನ್ನಾಗಿ ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಹಾಗೂ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧವಿಲ್ಲ ಎಂದು ತಿಳಿಸಿದರು.

ಮೀಸಲು ಅರಣ್ಯದ ಗ್ರಾಮಗಳಲ್ಲಿ ನಿಬಂಧನೆಗಳ ಕುರಿತು ಅಲ್ಲಿನ ಜನತೆಗೆ ಯಾವುದೇ ಗೊಂದಲವಾಗದಂತೆ ಸ್ಥಳೀಯ ಪಿಡಿಒ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಮಾಹಿತಿ ಒದಗಿಸಬೇಕು. ಆ ಪ್ರದೇಶಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸ್ಥಳೀಯ ಗ್ರಾಪಂ ಸದಸ್ಯರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಒಳಗೊಂಡ ಜಿಲ್ಲಾಮಟ್ಟದ ಸಮಿತಿ ಇರಲಿದೆ. ಅದರ ಅನುಮತಿ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಡಿಸಿ ಡಾ. ಕುಮಾರ್, ಚಿಕ್ಕಮಗಳೂರು ತಹಸೀಲ್ದಾರ್ ಡಾ. ಕಾಂತರಾಜ್, ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್, ಸಹಾಯಕ ಅರಣ್ಯಾಧಿಕಾರಿ ಮುದ್ದಣ್ಣ, ಭೂ ದಾಖಲೆ ಇಲಾಖೆ ನಿರ್ದೇಶಕ ದೇವರಾಜ್ ಇತರರಿದ್ದರು.

ಅಪರಾಧ ಕೃತ್ಯ ತಡೆಗೆ ನೆರವು ಅಗತ್ಯ: ಸಂರಕ್ಷಿತ ಮೀಸಲು ಅರಣ್ಯ ಪ್ರದೇಶಗಳಲ್ಲಿ ಯಾವುದೇ ಅಪರಾಧ ಕೃತ್ಯ ಸಂಭವಿಸಿದ ಸಂದರ್ಭ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಡಾ. ಬಗಾದಿ ಗೌತಮ್ ತಿಳಿಸಿದರು. ವನ್ಯಜೀವಿಗಳು ಮೃತಪಟ್ಟಲ್ಲಿ, ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ಬೆಂಕಿ ನಂದಿಸಲು ಸಹಕರಿಸಬೇಕು. ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ತರದಂತೆ, ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ, ವನ್ಯಜೀವಿಗಳಿಗೆ ತೊಂದರೆಯಾಗದಂತೆ ಹಾಗೂ ಗಿಡ ನೆಡುವ ಕಾರ್ಯಕ್ರಮಗಳಿಗೆ ಅರಣ್ಯ ಇಲಾಖೆ ಜನರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು ಎಂದರು.

ಸಂರಕ್ಷಿತ ಮೀಸಲು ಪ್ರದೇಶಗಳನ್ನು ಗುರುತಿಸಿರುವುದರಿಂದಾಗಿ ಅಲ್ಲಿನ ಗ್ರಾಮಗಳಲ್ಲಿ ಹಾಲಿ ಇರುವ ಅರಣ್ಯ, ಕಂದಾಯ, ಖಾಸಗಿ ಜಮೀನಿನ ಸ್ವರೂಪದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ವನ್ಯಜೀವಿಗಳು ಸೇರಿ ಜೀವ ವೈವಿಧ್ಯತೆ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಡಿಸಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net