ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಲಿ

Published on

ಹುಣಸೂರು: ತಾಲೂಕಿನ ಶೆಟ್ಟಳ್ಳಿ ಹಾಡಿಯ ನಿವಾಸಿಗಳು ಮಾನವ ಸರಪಳಿ ರಚಿಸಿ ಭಾನುವಾರ ಪ್ರಜಾಪ್ರಭುತ್ವ ದಿನವನ್ನು ಆಚರಿಸಿದರು.
ವಿಶ್ವ ಆದಿವಾಸಿ ಹಕ್ಕಿನ ದಿನ ಹಾಗೂ ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮಾನವ ಸರಪಳಿ, ಸಂವಿಧಾನ ಪೀಠಿಕೆ ಒದುವುದರ ಜತೆಗೆ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಬೇಕೆಂಬ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಲಾಯಿತು.


ಹಾಡಿಯ ಮುಖಂಡ ಕೊಳವಿಗೆ ಜಯಪ್ಪ ಸಂವಿಧಾನ ಪೀಠಿಕೆಯನ್ನು ಓದಿದರು. ನಂತರ ಮಾತನಾಡಿದ ಅವರು, ಆದಿವಾಸಿಗಳು ಎಂದಿಗೂ ಪ್ರಜಾಪ್ರಭುತ್ವವಾದಿಗಳೇ ಆಗಿದ್ದಾರೆ. ಅವರು ತಮ್ಮ ಬೇಡಿಕೆಗಾಗಿ ಪ್ರಜಾತಂತ್ರದ ರೀತಿ ನೀತಿಗಳನ್ನು ಶಾಂತಿಯುತವಾಗಿ ಅರ್ಧ ಶತಮಾನಗಳಿಂದ ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ, ಸರ್ಕಾರಗಳು ಅವರ ಶಾಂತಿಯುತ ಪ್ರತಿಭಟನೆಯನ್ನು ಕಡೆಗಣಿಸುತ್ತಿವೆ. ಆದಿವಾಸಿಗಳ ಬಹುವರ್ಷಗಳ ಬೇಡಿಕೆಯಾದ ಅರಣ್ಯ ಹಕ್ಕು, ಪುನರ್ವಸತಿ ಹಕ್ಕನ್ನು ಕರ್ನಾಟಕ ಸರ್ಕಾರ ಕೂಡಲೇ ಜಾರಿಗೊಳಿಸಿ ಆದಿವಾಸಿ ಹಕ್ಕುಗಳನ್ನು ರಕ್ಷಿಸಬೇಕೆಂದು ಆಗ್ರಹಿಸಿದರು.


ಇತ್ತೀಚೆಗೆ ನಿಧನರಾದ ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಕೊಳವಿಗೆ ಜಯಪ್ಪ, ಉಪಾಧ್ಯಕ್ಷರಾಗಿ ಪಾಪುಶೆಟ್ಟಳ್ಳಿ, ಚಿನ್ನಪ್ಪ ಕಪ್ಪನಕಟ್ಟೆ, ಮಹದೇವು ಹೆಮ್ಮಿಗೆ ಹಾಗೂ ಕಾರ್ಯದರ್ಶಿಯಾಗಿ ಮಂಜುನಾಥ್, ಸಹಕಾರ್ಯದರ್ಶಿಯಾಗಿ ಸೋಮಶೇಖರ್ ಮತ್ತು ಖಜಾಂಚಿಯಾಗಿ ಬಿಲ್ಲೇನಹೊಸಹಳ್ಳಿ ಶಿವಣ್ಣ ಅವರನ್ನು ಆಯ್ಕೆ ಮಾಡಲಾಯಿತು.
ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಗಿರಿಜಾ, ಆದಿವಾಸಿ ಜನತಾ ಸಂಸತ್ ಹಾಗೂ ಡೀಡ್ ಸಂಸ್ಥೆಯ ಡಾ.ಎಸ್.ಶ್ರೀಕಾಂತ್, ಪ್ರಕಾಶ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net