

ಲಿಂಗಸುಗೂರು: ಸಮೀಪದ ಕಸಬಾಲಿಂಗಸುಗೂರು ಗ್ರಾಮದ ಸಿಆರ್‌ಪಿಎಫ್ ಎಎಸ್‌ಐ ಚನ್ನಬಸಪ್ಪ ಜೂಲಗುಡ್ಡ ಅವರ ಮೇಲೆ ಹಲ್ಲೆ ಮಾಡಿದವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಮಾಜಿ ಹಾಗೂ ಹಾಲಿ ಅರೆಸೇನಾ ಪಡೆಗಳ ಯೋಧರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಲಾಯಿತು.
ಯೋಧ ಚನ್ನಬಸಪ್ಪ ಅವರ ಸಹೋದರಿ ದೇವಮ್ಮ ಜಮೀನಿನ ಬದುವಿನ ವಿಚಾರಕ್ಕೆ ಪಕ್ಕದ ಜಮೀನಿನ ಮಾಲೀಕರು ಜಗಳ ಮಾಡಿದಾಗ ಚನ್ನಬಸಪ್ಪ ಸಮಾಧಾನ ಪಡಿಸಿದ್ದರು. ಆದರೆ, ಮೇ 5 ರಂದು ಕಸಬಾಲಿಂಗಸುಗೂರು ರಸ್ತೆಯ ವರದೇಂದ್ರ ಲೇಔಟ್‌ನಲ್ಲಿ ಸ್ಥಳೀಯರಾದ ಅಮರೇಶ ಮತ್ತು ಮಂಜುನಾಥ ಎನ್ನುವವರು ಚನ್ನಬಸಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇಡೀ ದೇಶ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ವಿಜಯೋತ್ಸವ ಆಚರಿಸುವಾಗ ಯೋಧನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಯೋಧನ ಸಹೋದರಿಯ ಜಮೀನಿನ ಗಡಿ ಗುರುತಿಸಿ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ತಾಲೂಕು ಅಧ್ಯಕ್ಷ ಕೆ.ಹನುಮಂತ ಕನ್ನಾಳ, ಗೌರವಾಧ್ಯಕ್ಷ ಪಂಪಣ್ಣ ಜಾವೂರು, ಉಪಾಧ್ಯಕ್ಷ ಕುಪ್ಪಣ್ಣ ಕುರ‌್ಲಿ, ಕಾರ್ಯದರ್ಶಿ ಸಲೀಂ, ಪ್ರಮುಖರಾದ ವಿಶ್ವನಾಥ ನಾಯ್ಕ, ಮಹಾಂತೇಶ ಹಿರೇಮಠ, ಪಂಪಯ್ಯ, ಮಾನಪ್ಪ ಬಡಿಗೇರ, ಯಲ್ಲಪ್ಪ ಗೂಗಿಹಾಳ, ನಿಂಗಪ್ಪ, ಸಿದ್ಧರಾಜು, ನೀಲಪ್ಪ ಮೇಟಿ, ಆರ್.ವಿ.ಪಾಟೀಲ್ ಇತರರಿದ್ದರು.