

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಣ ಉದ್ಯೋಗ ಉದ್ಯಮ ಬೆಳೆದಂತೆ ಮಾದಕ ದ್ರವ್ಯಗಳು, ಅಫೀಮು ವಸ್ತುಗಳ ಜಾಲ ಬೇರೆ ಬೇರೆ ಸ್ವರೂಪದಲ್ಲಿ ಸಮಾಜವನ್ನು ಆವರಿಸುತ್ತಿದೆ. ಇದನ್ನು ತಡೆಗಟ್ಟಿ ಸಮಾಜ, ಯುವ ಸಮೂಹ ರಕ್ಷಿಸಲು ಎಲ್ಲರ ಸಾಂಕ ಪ್ರಯತ್ನ ಮತ್ತು ಟೀಂ ವರ್ಕ್ ಮುಖ್ಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಜಿ. ನರೇಂದರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಧಾರವಾಡ ವಕೀಲರ ಸಂಘದ ಆಶ್ರಯದಲ್ಲಿ ಶನಿವಾರ ಏರ್ಪಡಿದ್ದ ಮಾದಕ ವಸ್ತು, ದ್ರವ್ಯ ಪ್ರಕರಣಗಳ ನಿರ್ವಾಹಕ ತನಿಖಾ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾದಕ ಔಷಧಿಗಳ ಮತ್ತು ಮನೋ ಪರಿಣಾಮಕ ವಸ್ತುಗಳ ಅಧಿನಿಯಮ-1985 ಕುರಿತ ಕಾನೂನು ಕಾರ್ಯಗಾರ ಉದ್ಘಾಟಿಸಿ, ಮಾತನಾಡಿದರು.
ಅಪರಾಧ ಕೃತ್ಯಗಳ ತನಿಖೆ ಮಾಡಿದಾಗ ಮಾದಕ ವಸ್ತುಗಳ ಬಳಕೆ, ವ್ಯಸನ ಅಪರಾಧಿಯಲ್ಲಿ ಕಾಣಸಿಗುತ್ತದೆ. ಸರಿಯಾದ ರೀತಿ ಸಾಕ್ಷೃಗಳ ಸಂಗ್ರಹ, ಮಾದರಿಗಳ ಸಂಗ್ರಹ, ನಿಮಾನುಸಾರದ ಪ್ರಕರಣ ದಾಖಲು ಮಾಡುವುದರಿಂದ ಪ್ರಕರಣ ರುಜುವಾತು ಮಾಡಿ ಅಪರಾಧಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗುತ್ತದೆ ಎಂದರು.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಮಾತನಾಡಿ, ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ವಿಶೇಷವಾಗಿ ಮಾದಕ ವಸ್ತುಗಳ ಪ್ರಕರಣಗಳ ತನಿಖಾಧಿಕಾರಿಗಳು ನಿಯಮಾನುಸಾರ ತನಿಖೆ ಮಾಡಿ, ವರದಿ ಸಲ್ಲಿಸಬೇಕು ಎಂದರು.
ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಆನಂದಕುಮಾರ ಮಗದುಮ್, ಪರಿಷತ್ ಸದಸ್ಯರಾದ ಹಿರಿಯ ನ್ಯಾಯವಾದಿ ವಿ.ಡಿ. ಕಾಮರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಪೊಲೀಸ್ ಪಾಟೀಲ ಮಾತನಾಡಿದರು.
ಮಂಗಳೂರು ಉಪವಿಭಾಗದ ಅಬಕಾರಿ ಉಪ ಆಯುಕ್ತ ಸೈಯದ್ ತಫ್ಜೀಲ್ ಉಲ್ಲಾ, ಜಿಲ್ಲಾ ನ್ಯಾಯಾಲಯದ ಎಲ್ಲ ನ್ಯಾಯಾಲಯಗಳ ನ್ಯಾಯಾಧೀಶರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ರಾಘವೇಂದ್ರ ಶೆಟ್ಟಿಗಾರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ, ಡಿವೈಎಸ್ಪಿಗಳಾದ ನಾಗರಾಜ ಎಸ್.ಎಂ, ಎಸ್.ಎಸ್. ಹಿರೇಮಠ, ತರರು ಇದ್ದರು.
ಸಿಜೆಎಂ ಸಂಜಯ ಗುಡಗುಡಿ ಸ್ವಾಗತಿಸಿದರು. ಸೋಮಶೇಖರ ಜಾಡರ ನಿರೂಪಿಸಿದರು. ಪಿ.ಎಫ್.ದೊಡ್ಡಮನಿ ವಂದಿಸಿದರು.