

ಮೈಸೂರು: ದೇಶದ ಜನರಿಗೆ ಅನ್ನ ಕೊಡುವ ಕೃಷಿ, ತೋಟಗಾರಿಕೆ ಕ್ಷೇತ್ರ ಉಳಿಯಬೇಕು. ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದ ಕಡೆ ಪದವೀಧರರು ಮುಖ ಮಾಡುವಂತಹ ದಿನಗಳು ಬರಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಆಶಿಸಿದರು.
ಮೈಸೂರು ತಾಲೂಕಿನ ಯಲಚಹಳ್ಳಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ತೋಟಗಾರಿಕೆ ಮಹಾವಿದ್ಯಾಲಯದಿಂದ ಶುಕ್ರವಾರ ಆಯೋಜಿಸಿದ್ದ ಮಹಾವಿದ್ಯಾಲಯ ಮತ್ತು ವಿದ್ಯಾರ್ಥಿ ವಸತಿ ನಿಲಯಗಳ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಸಾವಿರ ತೆಂಗಿನ ಮರ ಇದ್ದರೂ ಆದಾಯ ಇಲ್ಲದಂತಾಗಿತ್ತು. ಐದು ಎಕರೆಯಲ್ಲಿ ಬಾಳೆ ಬೆಳೆದವನು ಶ್ರೀಮಂತ ಎನ್ನುತ್ತಿದ್ದರು. ಆದರೆ ಈಗ ಬೆಲೆ ಸಿಗದೆ ಬಾಳೆ ಬೆಳೆಗಾರರು ಕಂಗಾಲಾಗಿದ್ದಾರೆ. ಆರು ತಿಂಗಳಿನಿಂದ ತೆಂಗಿನಕಾಯಿ, ಎಳೆನೀರು, ಕೊಬ್ಬರಿ ಬೆಲೆ ಜಾಸ್ತಿಯಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಕೃಷಿಕರ ಸ್ಥಿತಿ ಶೋಚನೀಯವಾಗಿದೆ. ಕೃಷಿ ಜಮೀನು ಕಡಿಮೆಯಾಗುತ್ತಿದೆ. ಆಹಾರ, ತೋಟಗಾರಿಕೆ ಬೆಳೆಗಳು ಇಲ್ಲದೆ ಮನುಷ್ಯ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಕೃಷಿ ಚಟುವಟಿಕೆ ಮಾಡುವ ರೈತರ ಹಿತ ಕಾಪಾಡಬೇಕು ಎಂದರು.
ಕೃಷಿ ವಿಷಯದಲ್ಲಿ ಬಿಎಸ್‌ಸಿ ಅಗ್ರಿಕಲ್ಚರ್, ಎಂಎಸ್‌ಸಿ ಹಾರ್ಟಿಕಲ್ಚರ್ ಮಾಡಿದವರಿಗೆ ಮುಂದೆ ಅನುಕೂಲವಾಗಲಿದೆ. ಕೃಷಿ, ತೋಟಗಾರಿಕೆ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡಲು ಸಾಧ್ಯವಾಗಿಲ್ಲ. ಮುಂದೊಂದು ದಿನ ಕೃಷಿಕ, ರೈತನೇ ಉಳಿಯುವುದು. ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ ಎಂದು ಹೇಳಿದರು.
ಕೃಷಿ ಇಲಾಖೆಯಲ್ಲಿ ದಿನಗೂಲಿ ಆಧಾರದ ಮೇಲೆ ನೇಮಕಕ್ಕೆ ಚಿಂತನೆ ಮಾಡಲಾಗಿದೆ. ಅದರ ಬದಲಿಗೆ ನೇರ ನೇಮಕಾತಿ ಮಾಡಿಕೊಂಡು ಕೃಷಿ, ತೋಟಗಾರಿಕೆ ಕ್ಷೇತ್ರ ಉಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು. ಉಮೇಶ್ ಕತ್ತಿ ಅವರು ತೋಟಗಾರಿಕೆ ಸಚಿವರಾಗಿದ್ದಾಗ ತೋಟಗಾರಿಕೆ ಮಹಾವಿದ್ಯಾಲಯವನ್ನು ಬೇರೆ ಕಡೆ ಆರಂಭಿಸುವಂತೆ ಕೆಲವರು ಪ್ರಯತ್ನ ಮಾಡಿದ್ದರು. ಆದರೆ ನಾನು ಮೈಸೂರು ತಾಲೂಕಿಗೆ ತರಲು ಹೋರಾಟ ಮಾಡಿ ಪ್ರಯತ್ನ ಮಾಡಿದ್ದರಿಂದಾಗಿ ಇಲ್ಲಿಯೇ ಸ್ಥಾಪನೆಯಾಯಿತು. ವಿವಿಗೆ ರಸ್ತೆ ಮಾಡುವಂತೆ ಬೇಡಿಕೆ ಇಟ್ಟಿದ್ದರಿಂದ ಅನುದಾನ ಬಿಡುಗಡೆ ಮಾಡಿಸಿ ರಸ್ತೆ ಡಾಂಬರೀಕರಣ ಮಾಡಿಸಿದ್ದೇನೆ. ಈಗ ಕಾಂಪೌಂಡ್, ಆಡಿಟೋರಿಯಂ ಆಗುವಂತೆ ಮನವಿ ಮಾಡಿದ್ದು, ಸಚಿವರ ಗಮನಕ್ಕೆ ತಂದು ಕಾಮಗಾರಿ ಮಾಡಿಸುವ ಭರವಸೆ ನೀಡಿದರು.
ನಾನು ಕೂಡ ಪ್ರಗತಿಪರ ರೈತನಾಗಿದ್ದೆ, ಹೊಲ ಉಳುತ್ತಿದ್ದೆ. 1967ರಲ್ಲಿ ಭೀಕರ ಬರಗಾಲ ಬಂದಿದ್ದರಿಂದ ತೊಂದರೆಯಾಯಿತು. 1969ರಲ್ಲಿ ಇಂದಿರಾಗಾಂಧಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದಾಗ ಗುಂಗ್ರಾಲ್ ಛತ್ರದಲ್ಲಿ ಸೊಸೈಟಿ ಆರಂಭಿಸಿ ಕೃಷಿ ಜತೆಗೆ ಸಹಕಾರ ಸಂಘವನ್ನು ನೋಡಿಕೊಂಡು ಬಂದಿದ್ದರಿಂದಾಗಿ ಈ ಹಂತಕ್ಕೆ ಬೆಳೆಯಲು ಕಾರಣವಾಯಿತು ಎಂದು ನೆನೆದರು.
ಮೈಸೂರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಜಿ.ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಡೀನ್ ಡಾ.ಕೆ.ರಾಮಚಂದ್ರನಾಯಕ್, ಸಹಾಯಕ ಡೀನ್ ಡಾ.ತನ್ವೀರ್‌ಅಹ್ಮದ್, ನಿಲಯಪಾಲಕ ಡಾ.ಎಸ್.ಸಿ.ವೆಂಕಟೇಶ್, ಡಾ.ಅಮ್ರಿನ್ ತಾಜ್, ಗುಂಗ್ರಾಲ್ ಛತ್ರದ ಗ್ರಾಪಂ ಅಧ್ಯಕ್ಷ ಯೋಗಮೂರ್ತಿ, ಮಾಜಿ ಅಧ್ಯಕ್ಷ ಇ.ಪಿ.ರವಿ, ಸದಸ್ಯರಾದ ದೇವರಾಜು, ನಟರಾಜು, ತರಗತಿ ಪ್ರತಿನಿಧಿಗಳಾದ ಬಿ.ಸೌಂದರ್ಯ, ಟಿ.ಲೇಖನ, ಬಿ.ಚಂದನಕುಮಾರ್, ಪಿ.ವಿ.ಜ್ಯೋತಿಕೃಷ್ಣ, ತರುಣ್ ಗೌಡ, ಎಚ್.ಎಂ.ಯಶ್ವಂತ್, ನಂದುಕುಮಾರ್, ಜೆ.ಐ.ಆಕಾಶ್, ಪಿ.ಲಕ್ಷ್ಮೀ, ಎಸ್.ಮನೋಹರಿ, ಆರ್.ನಿಸರ್ಗ ಇತರರು ಇದ್ದರು.